ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಕೋಟಿ ಹಗರಣ: ಆರೋಪ

| Published : Oct 05 2025, 01:00 AM IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಕೋಟಿ ಹಗರಣ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನವನ್ನು ಅಧಿಕಾರಿಗಳು, ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸ್ಟೇಟ್ಸ್‌ ಮಾರ್ಕೆಟಿಂಗ್‌ ಕಮ್ಯೂನಿಕೇಷನ್‌ ಅಂಡ್‌ ಅಡ್ವಟೈಸ್‌ ಲಿಮಿಟೆಡ್‌ನವರು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ. ಸರ್ಕಾರದಡಿ ಸ್ಥಾಪಿತವಾಗಿರುವ ಎಂಸಿಎ ಹಣ ಲೂಟಿಗೆ ಸಹಕಾರ ನೀಡಿದೆ ಎಂದು ಆರೋಪಿಸಿ ಲೋಕಾಯುಕ್ತ ಅಧೀಕ್ಷಕರಿಗೆ ದೂರು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ಧತೆ, ನಿರ್ವಹಣೆಯಲ್ಲಿ ಬಹುಕೋಟಿ ಹಗರಣ ನಡೆಸಲಾಗಿದೆ ಎಂದು ಆರೋಪಿಸಿ ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.

ಸಮ್ಮೇಳನವನ್ನು ಅಧಿಕಾರಿಗಳು, ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸ್ಟೇಟ್ಸ್‌ ಮಾರ್ಕೆಟಿಂಗ್‌ ಕಮ್ಯೂನಿಕೇಷನ್‌ ಅಂಡ್‌ ಅಡ್ವಟೈಸ್‌ ಲಿಮಿಟೆಡ್‌ನವರು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ. ಸರ್ಕಾರದಡಿ ಸ್ಥಾಪಿತವಾಗಿರುವ ಎಂಸಿಎ ಹಣ ಲೂಟಿಗೆ ಸಹಕಾರ ನೀಡಿದೆ ಎಂದು ಆರೋಪಿಸಿ ಲೋಕಾಯುಕ್ತ ಅಧೀಕ್ಷಕರಿಗೆ ದೂರು ಸಲ್ಲಿಸಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜರ್ಮನ್‌ ಹ್ಯಾಂಗರ್‌ ಪೆಂಡಾಲ್‌ಗಳನ್ನು ಚದರಡಿಗೆ 30 ರು.ನಿಂದ 35 ರು.ಗಳವರೆಗೆ ಲಭ್ಯವಿದ್ದರೂ 69 ರು.ಗಳಂತೆ ಸಾಹಿತ್ಯ ಸಮ್ಮೇಳನಕ್ಕೆ ಪೂರೈಸಿದೆ. ಮಾರುಕಟ್ಟೆಯ ದುಪ್ಪಟ್ಟು ದರಕ್ಕೆ ಎಂಸಿಎ ದರಗಳನ್ನು ವಿಧಿಸಿದ್ದರೂ ಅಧಿಕಾರಿಗಳು ಶಾಮೀಲಾಗಿ ಎಂಸಿಎ ದರಕ್ಕೆ ಒಪ್ಪಿ ವೇದಿಕೆ ನಿರ್ಮಾಣದ ಹೆಸರಿನಲ್ಲಿ 8.92 ಕೋಟಿ ರು. ಹಣವನ್ನು ಎಂಸಿಎ ವ್ಯವಸ್ಥಾಪಕ ನಿರ್ದೇಶಕ ಅತೀಕುಲ್ಲಾ ಶರೀಫ್‌ರವರ ಹತ್ತಿರದ ಸಂಬಂಧಿ ಎನ್ನಲಾದ ಮೈಸೂರಿನ ಶರೀಫ್‌ ಫರ್ನೀಚರ್‌ಗೆ ಬಿಡುಗಡೆ ಮಾಡಿದ್ದಾರೆ ಎಂದು ಆಪಾದಿಸಿದರು.

ಸಾಹಿತ್ಯ ಸಮ್ಮೇಳನದ ಬಳಿಕ ಫೆ.7ರಿಂದ ಫೆ.21ರವರೆಗೆ ಮಂಡ್ಯದಲ್ಲಿ ನಡೆದ ಖಾದಿ ಗ್ರಾಮೋದ್ಯೋಗ ಮಂಡಳಿ ನಡೆಸಿದ ವಸ್ತು ಪ್ರದರ್ಶನದಲ್ಲಿ ಇದೇ ಎಂಸಿಎ 15 ಸಾವಿರ ಚದರಡಿ ಜರ್ಮನ್‌ ಹ್ಯಾಂಗರ್‌ ಪೆಂಡಾಲ್‌ನ್ನು ಪ್ರತಿ ಚದರಡಿಗೆ 55 ರು.ಗಳಂತೆ ಅಳವಡಿಸಿದೆ. ಸಾಹಿತ್ಯ ಸಮ್ಮೇಳನಕ್ಕಿಂತ 14 ರು. ಕಡಿಮೆ ಮೊತ್ತ ನಮೂದಿಸಿದ್ದು, ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಪೆಂಡಾಲ್‌ಗಳನ್ನು ಅಳವಡಿಸುವ ವೆಂಡರ್‌ಗಳಿದ್ದರೂ ಭ್ರಷ್ಟಾಚಾರ ನಡೆಸುವ ಸಲುವಾಗಿ ದುಬಾರಿ ದರ ವಿಧಿಸಿ ವೇದಿಕೆ ನಿರ್ಮಾಣ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.

ಸಮ್ಮೇಳನದಲ್ಲಿ ಸರಿ ಸುಮಾರು 4.69 ಲಕ್ಷ ಜನರಿಗೆ ಆಹಾರ ಸರಬರಾಜು ಮಾಡಿರುವುದಾಗಿ ಸಮಿತಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದು, ವಾಸ್ತವವಾಗಿ ಆಹಾರ ಸಮಿತಿ ಮೂಲಕ 8,10,649 ಮಂದಿ ಸಮ್ಮೇಳನದಲ್ಲಿ ಆಹಾರ ಸ್ವೀಕರಿಸಿದ್ದಾರೆಂದು ನಮೂದಿಸಲಾಗಿದೆ. ಇದಕ್ಕಾಗಿ ಸ್ಕೈಬ್ಲೂ ಕಂಪನಿಗೆ 6.74 ಕೋಟಿ ರು.ಗಳನ್ನು ಪಾವತಿಸಲಾಗಿದೆ. ಸಾಹಿತ್ಯ ಸಮ್ಮೇಳನದ ಬಹುದೊಡ್ಡ ಮೊತ್ತ ಆಹಾರದ ಹೆಸರಿನಲ್ಲಿ ವ್ಯಯವಾಗಿದೆ ಎಂದು ಆರೋಪಿಸಿದರು.

ಮೊದಲನೇ ದಿನವೇ ಪೊಲೀಸರು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸೇರಿ 18,480 ಮಂದಿ ಬೆಳಗಿನ ತಿಂಡಿ ಸೇವಿಸಿರುವುದಾಗಿ ದಾಖಲಿಸಿಕೊಂಡಿದ್ದಾರೆ. ವಾಸ್ತವಲದಲ್ಲಿ ಈ ಪ್ರಮಾಣದ ಸಿಬ್ಬಂದಿ ಸಮ್ಮೇಳನದ ಕೆಲಸಕ್ಕೆ ನಿಯೋಜನೆಗೊಂಡಿದ್ದರೆ ಎಂಬ ಮಾಹಿತಿ ಇಲ್ಲ. ಸಾರಿಗೆ ಸಂಸ್ಥೆ 132 ಬಸ್‌ಗಳನ್ನು ಮಾತ್ರ ಒದಗಿಸಿದ್ದು, ಹೀಗಿರುವಾಗ ಸಮಿತಿಯ ಲೆಕ್ಕಾಚಾರವೇ ಅಸ್ಪಷ್ಟವಾಗಿದೆ ಎಂದು ದೂರಿದರು.

ಸಮ್ಮೇಳನದ ಆವರಣ ಸ್ವಚ್ಛತೆಗಾಗಿ 1050 ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು. ಅವರಿಗೆ ದಿನಕ್ಕೆ 637 ರು. ವೇತನ ನೀಡಲಾಗಿದೆ. ಸ್ವಚ್ಛತೆಗಾಗಿ 33.33 ಲಕ್ಷ ರು.ಗಳನ್ನು ಸ್ಕೈಬ್ಲೂ ಸಂಸ್ಥೆಗೆ ಬಿಡುಗಡೆಗೊಳಿಸಿದೆ. ವಾಸ್ತವದಲ್ಲಿ ಆ ಪ್ರಮಾಣದ ಪೌರ ಕಾರ್ಮಿಕರನ್ನು ಸ್ವಚ್ಛತೆಗಾಗಿ ನಿಯೋಜಿಸಿರಲಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು, ಕಸದ ವಾಹನಗಳನ್ನು ಬಳಸಿ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತೆ ಹೆಸರಿನಲ್ಲಿ ಸ್ಕೈಬ್ಲೂ ಸಂಸ್ಥೆ ಹಣ ಲಪಟಾಯಿಸಿದೆ ಎಂದು ಆರೋಪಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪರಿಷತ್ತಿನ ಪದಾಧಿಕಾರಿಗಳು, ವಿದೇಶಿ ಗಣ್ಯರು, ಜನಪ್ರತಿನಿಧಿಗಳು, ಆಹ್ವಾನಿಕರು, ನೋಂದಾಯಿತ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆಗಾಗಿ ಒಟ್ಟು 1.97 ಕೋಟಿ ರು. ಹಣವನ್ನು ಸ್ಕೈ ಬ್ಲೂ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ ನೀಡಲಾಗಿದೆ. ಪ್ರವಾಸಿಗರು ಹೆಚ್ಚಿರುವ ವೇಳೆಯಲ್ಲೂ ಇರದಷ್ಟು ದುಬಾರಿದರಗಳನ್ನು ಹೋಟೆಲ್‌ಗಳಿಗೆ ಪಾವತಿರುವ ಬಗ್ಗೆ ದಾಖಲೆ ಸೃಷ್ಟಿಸಲಾಗಿದೆ. ಅಮರಾವತಿ ಹೋಟೆಲ್‌ನಲ್ಲಿ ಸೂಟ್‌ ರೂಂ ಬಾಡಿಗೆ 8454 ರು. ನೀಡಲಾಗಿದೆ. ಇಲ್ಲಿ ತಂಗಿದ್ದವರು ಸೋಫಾ ಡ್ಯಾಮೇಜ್‌ ಮಾಡಿದ್ದಾರೆಂದು ಅದರ ವೆಚ್ಚ 4449 ರು.ಗಳನ್ನು ಭರಿಸಲಾಗಿದೆ. ರೂಮ್‌ಗಳಲ್ಲಿ ಉಳಿದಿದ್ದವರ ಊಟದ ವೆಚ್ಚ 75956 ರು. ಭರಿಸಲಾಗಿದೆ. ವಾಸ್ತವದಲ್ಲಿ ಈ ರೂಂಗಳಲ್ಲಿ ಉಳಿದಿದ್ದ ಗಣ್ಯರು ಯಾರು ಎಂಬ ಬಗ್ಗೆ ಯಾವುದೇ ದಾಖಲೆ, ವಹಿಯನ್ನು ನಿರ್ವಹಿಸಿಲ್ಲದಿರುವುದು ಸಂಶಯಾಸ್ಪದವಾಗಿದೆ ಎಂದರು.

ಇದಲ್ಲದೇ, ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ವೆಚ್ಚಕ್ಕಾಗಿ ಎರಡೂವರೆ ಕೋಟಿ ರು. ಹಣ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಸಕಾಲಕ್ಕೆ ಲೆಕ್ಕ ಸಲ್ಲಿಸದ ಜೊತೆಗೆ ಈ ಹಗರಣಕ್ಕೆ ನೇರ ಮತ್ತು ಪರೋಕ್ಷ ಭಾಗಿದಾರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಎಂಸಿಎ ಸೂಕ್ತ ದರದಲ್ಲಿ ಸರ್ಕಾರಕ್ಕೆ ತನ್ನ ವೆಂಡರ್‌ಗಳ ಮೂಲಕ ಗುಣಾತ್ಮಕ ಸೇವೆ ಒದಗಿಸುವ ಸಲುವಾಗಿ 4 ಜಿ ವಿನಾಯ್ತಿ ನೀಡಲಾಗುತ್ತದೆ. ಆದರೆ, ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ಸ್ಕೈ ಬ್ಲೂನಂತಹ ಬೇನಾಮಿ ಸಂಸ್ಥೆಗಳನ್ನು ಹುಟ್ಟುಹಾಕಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಎಚ್‌.ಡಿ.ಜಯರಾಂ, ಶಿವರಾಮು, ಮನು, ಮುದ್ದೇಗೌಡ, ವೆಂಕಟೇಶ್‌ ಇದ್ದರು.