ನಮಗೆ ಯೇಸುವಿನ ಫೋಟೋ ಕೊಟ್ಟು ಇದೊಂದು ದೇವರನ್ನು ಮಾತ್ರ ಪೂಜಿಸಿ ಬೇರೆ ಯಾವ ದೇವರನ್ನು ಪೂಜಿಸಬೇಡಿ. ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನಾವು ಒದಿಸುತ್ತೇವೆ ಎಂದು ಆಮಿಷ ಒಡ್ಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಮಿಷದೊಂದಿಗೆ ನಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಾಲೂಕಿನ ಶಿಕಾರಿಪುರ ಗ್ರಾಮದ ಚನ್ನಾರೆಡ್ಡಿ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಅವರ ಬಳಿ ದೂರು ಸಲ್ಲಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಅವರಿಗೆ ದೂರು ಸಲ್ಲಿಸಿದ ಚನ್ನಾರೆಡ್ಡಿ, ಶಿಕಾರಿಪುರ ಗ್ರಾಮದಲ್ಲಿ ಈಗಾಗಲೇ ಕ್ರೈಸ್ತ ಸಮುದಾಯದ 2 ಚರ್ಚ್‌ಗಳಿವೆ. ಮತ್ತೆರಡು ಚರ್ಚ್‌ಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ ಎಂದರು.

ನಮಗೆ ಯೇಸುವಿನ ಫೋಟೋ ಕೊಟ್ಟು ಇದೊಂದು ದೇವರನ್ನು ಮಾತ್ರ ಪೂಜಿಸಿ ಬೇರೆ ಯಾವ ದೇವರನ್ನು ಪೂಜಿಸಬೇಡಿ. ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನಾವು ಒದಿಸುತ್ತೇವೆ ಎಂದು ಆಮಿಷ ಒಡ್ಡಲಾಗುತ್ತಿದೆ ಎಂದು ದೂರಿದರು.

ಇಷ್ಟು ಮಾತ್ರವಲ್ಲದೆ ಗ್ರಾಮದ ಮಕ್ಕಳಿಗೆ ಚಾಕೊಲೇಟ್, ಕೇಕ್ ಕೊಟ್ಟು ಅವರನ್ನು ಒತ್ತಾಯ ಪೂರ್ವಕವಾಗಿ ಚರ್ಚ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ. ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಿಕೊಡಿ ಎಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಲೋಕಾಯುಕ್ತ ಎಸ್ಪಿ, ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ, ಅನಧಿಕೃತ ಚರ್ಚ್‌ಗಳಿದ್ದರೆ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಗ್ರಾಮಾಂತರ ಪಿಎಸ್‌ಐ ರಾಜೇಂದ್ರ ಅವರಿಗೆ ಸೂಚಿಸಿದರು.

35 ಅರ್ಜಿಗಳ ಸ್ವೀಕಾರ:

ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 35 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು. ಈ ಪೈಕಿ ಕಂದಾಯ ಇಲಾಖೆಗೆ ಸೇರಿದ 12, ಸೆಸ್ಕಾಂಗೆ ಸಂಬಂಧಿಸಿದ 2, ಪೊಲೀಸ್ ಇಲಾಖೆಗೆ ಸಂಬಂಧಿಸಿದ 4, ಇತರೆ 5 ಅರ್ಜಿಗಳು ಸಲ್ಲಿಕೆಯಾದರೆ, 4 ಅರ್ಜಿಗಳು ತಿರಸ್ಕೃತಗೊಂಡವು.

ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೂಲಕ ಸ್ಥಳದಲ್ಲಿಯೇ ಪರಿಹರಿಸಲಾಯಿತು. ಕರ್ತವ್ಯ ಲೋಪ ಹಾಗೂ ಒಂದೇ ವಿಚಾರಕ್ಕೆ ಹೆಚ್ಚು ದೂರುಗಳು ಸಲ್ಲಿಕೆಯಾದಂತಹ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಒಟ್ಟು 8 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ 7 ಪ್ರಕರಣ ಮತ್ತು ಪುರಸಭೆ ವಿರುದ್ಧ ಒಂದು ಪ್ರಕರಣ ದಾಖಲಿಸಿಕೊಂಡರು. ಕಂದಾಯ, ಹೇಮಾವತಿ, ಸೆಸ್ಕಾಂ, ಆರೋಗ್ಯ, ಪಂಚಾಯತ್ ರಾಜ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳು ಸಲ್ಲಿಕೆಯಾದವು.

ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ, ರವಿಕುಮಾರ್ ಮತ್ತು ಲೇಪಾಕ್ಷಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.