ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಭದ್ರತೆ ನೀಡುವಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದು ವಾಲ್ಮೀಕಿ ನಾಯಕರ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಜೆ. ರಾಮನಾಯಕ ಆರೋಪಿಸಿದರು.ಪಟ್ಟಣದ ಹಾಸನ- ಮೈಸೂರು ರಸ್ತೆಯ ಅಂಬೇಡ್ಕರ್ ಪುತ್ಥಳಿಯ ಮುಂದೆ ಚಂದಗಾಲು ಗ್ರಾಮದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ ಮತ್ತು ಮಹದೇವನಾಯಕನ ಸಾವಿನ ಘಟನೆಯನ್ನು ಖಂಡಿಸಿ ತಾಲೂಕು ನಾಯಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮಹದೇವನಾಯಕನ ಕುಟುಂಬದವರು ಜೂ. 1 ರಂದು ಠಾಣೆಗೆ ದೂರು ನೀಡಲು ಬಂದಾಗ ಪೊಲೀಸರು ಸ್ಪಂದಿಸಿ ಕ್ರಮ ಕೈಗೊಂಡಿದ್ದರೆ ಆತ್ಮಹತ್ಯೆಯ ಯತ್ನ ನಡೆಯುತ್ತಿರಲಿಲ್ಲ ಮತ್ತು ಅಮಾಯಕನ ಜೀವ ಬಲಿಯಾಗುತ್ತಿರಲಿಲ್ಲ ಇಂತಹಾ ಕೃತ್ಯಕ್ಕೆ ಕಾರಣರಾಗಿರುವ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.ಮಹದೇವನಾಯಕನ ಶವವನ್ನು ಕೆ.ಆರ್. ನಗರ ಪಟ್ಟಣದ ಮೂಲಕ ಚಂದಗಾಲು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಅವಕಾಶ ನೀಡದ ಪೊಲೀಸರು ಅಧಿಕಾರ ಬಳಸಿಕೊಂಡು ದಬ್ಬಾಳಿಕೆ ಮಾಡಿದ್ದು ಇದನ್ನು ನಾಯಕ ಸಮಾಜ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರು ರಾಜ್ಯ ಸರ್ಕಾರ, ತಾಲೂಕು ಆಡಳಿತ ಮತ್ತು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಡಿ. ರವಿಶಂಕರ್ ಪ್ರತಿಭಟನೆ ಮಾಡುತ್ತಿದ್ದ ತಾಲೂಕು ನಾಯಕ ಸಂಘದ ಪದಾಧಿಕಾರಿಗಳು ಮತ್ತು ಮುಖಂಡರೊಂದಿಗೆ ಮಾತುಕತೆ ನಡೆಸಿದರು.ಘಟನೆ ನಡೆದ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರಿಂದ ಆತನನ್ನು ಈಗಾಗಲೇ ಬಂಧಿಸಲಾಗಿದೆ. ಜತೆಗೆ ದೂರು ಪಡೆಯದೆ ನಿರ್ಲಕ್ಷ್ಯ ವಹಿಸಿದ್ದ ಪೊಲೀಸರನ್ನು ಅಮಾನತ್ತು ಮಾಡಿದ್ದು ಇದರೊಂದಿಗೆ ನೊಂದ ಕುಟುಂಬಕ್ಕೆ ನಾನು ವೈಯುಕ್ತಿಕವಾಗಿ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದು ಚಿಕಿತ್ಸೆಗೂ ಸಹಾಯ ಮಾಡಿದ್ದೇನೆ ಎಂದರು.
ಈ ವಿಚಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹದೇವನಾಯಕನ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದ ನಂತರ ಪ್ರತಿಭಟನಾಕಾರರು ಇದಕ್ಕೆ ಸಹಮತ ಸೂಚಿಸಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು.ತಾಲೂಕು ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲೂಕು ಘಟಕದ ಅಧ್ಯಕ್ಷ ಮಾದನಾಯಕ, ಗೌರವಾಧ್ಯಕ್ಷ ಎ.ಟಿ. ಶಿವಣ್ಣ, ನಾಯಕ ಸಮಾಜದ ಮುಖಂಡರಾದ ನಾಗರಾಜನಾಯಕ, ಸುಬ್ಬುಕೃಷ್ಣ, ಕೃಷ್ಣನಾಯಕ, ದೇವರಾಜು, ಲೋಹಿತ್, ಬೋರನಾಯಕ, ಬಸವರಾಜು, ಸಿ.ಆರ್. ಮಂಜುನಾಥ್, ರಾಜನಾಯಕ, ಈರಣ್ಣ ನಾಯಕ, ಚಂದಗಾಲು ರಾಜನಾಯಕ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೆಬ್ಬಾಳು ಪರಶುರಾಮು, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ ಮೊದಲಾದವರು ಇದ್ದರು.