ಸಾರಾಂಶ
ಹೊನ್ನಾಳಿ : ನೈಋತ್ಯ ಪದವೀಧರ ಕ್ಷೇತ್ರದ ಮೈತ್ರಿ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಅಭ್ಯರ್ಥಿಗಳ ಪರವಾಗಿ ಮತಯಾಚನೆ ವೇಳೆ ಅವರು ಮಾತನಾಡಿ, ಚಿಂತಕರ ಚಾವಡಿ ಎಂದೇ ಕರೆಯುವ ಮೇಲ್ಮನೆಯಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹರ ಸಿಗುತ್ತೆ ಎನ್ನುವ ವಿಶ್ವಾಸವಿದ್ದು, ಸಮಸ್ಯೆಗಳನ್ನು ಪೂರ್ಣ ಅರಿತವರು ಮಾತ್ರ ಅಲ್ಲಿ ಮಾತ ನಾಡಲು ಸಾಧ್ಯ, ಪದವೀಧರ ಕ್ಷೇತ್ರದ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಭೋಜೇಗೌಡರು ಇಬ್ಬರೂ ಸಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ರೀತಿಯಲ್ಲಿ ವಿಷಯಾ ಧರಿತವಾಗಿ ಮಾತನಾಡುತ್ತಾರೆ, ಆದ್ದರಿಂದ ಅವರಿಗೆ ಮೊದಲನೇ ಪ್ರಾಶಸ್ತ್ಯ ಮತ ನೀಡಿ ಎಂದು ಅವರು ಮನವಿ ಮಾಡಿದರು.
ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು, ದಿನ ಬೆಳಗಾದರೆ ಹಿಂದೂಗಳ ಮೇಲೆ ಹಲ್ಲೆ ಹಾಗೂ ಹುಬ್ಬಳಿಯ ಇಬ್ಬರು ಯುವತಿರ ಕೊಲೆಗಳು ರಾಜಾರೋಷವಾಗಿ ನಡೆದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು.
ಅಮಾನತು ಹಿಂಪಡೆಯಲಿ:
ಚನ್ನಗಿರಿ ಪೊಲಿಸ್ ಠಾಣೆ ಮೇಲೆ ಕಲ್ಲು ತೂರಾಟ ಪೊಲಿಸರ ಮೇಲೆ ಹಲ್ಲೆ ನಡೆದರೂ ಇನ್ನೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳದೆ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಹಾಗೂ ಪೊಲಿಸ್ ಇನ್ಸ್‌ಪೆಕ್ಟರ್ ನಿರಂಜನ್ ಅವರನ್ನು ಹೊಣೆಗಾರರನ್ನಾಗಿಸಿ ಅಮಾನತು ಮಾಡಿ ತುಷ್ಟೀಕರಣ ನೀತಿ ಅನುಸರಿಸಿರುವುದು ಖಂಡನೀಯ ಎಂದ ಅವರು, ಸರ್ಕಾರ ಕೂಡಲೇ ಅವರ ಅಮಾನತು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ತರಗನಹಳ್ಳಿ ರಮೇಶ್ ಗೌಡ, ನೆಲಹೊನ್ನೆ ಮಂಜುನಾಥ ಹಾಗೂ ಇನ್ನಿತರರು ಇದ್ದರು.
ವಾಲ್ಮೀಕಿ ನಿಗಮ ಹಗರಣ ಸಿಬಿಐಗೆ ವಹಿಸಲು ಆಗ್ರಹ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ಅಬಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು, ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿಗಮದ ಬಹುಕೋಟಿ ಹಗರಣ ಹಾಗೂ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.