ಪದವೀಧರರ ಕ್ಷೇತ್ರದಲ್ಲಿ ಬದಲಾವಣೆಗಾಗಿ ಅವಕಾಶ ಕೊಡಿ: ಪಕ್ಷೇತರ ಅಭ್ಯರ್ಥಿ ಉದಯ್ ಸಿಂಗ್

| Published : May 28 2024, 01:05 AM IST

ಪದವೀಧರರ ಕ್ಷೇತ್ರದಲ್ಲಿ ಬದಲಾವಣೆಗಾಗಿ ಅವಕಾಶ ಕೊಡಿ: ಪಕ್ಷೇತರ ಅಭ್ಯರ್ಥಿ ಉದಯ್ ಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಭ್ಯರ್ಥಿ ದೇವೇಗೌಡ ಪದವೀಧರ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಕೇಳುವ ನೈತಿಕತೆಯಿಲ್ಲ. ನಿಮ್ಮ ಹಣ, ನಿಮ್ಮ ಅಧಿಕಾರದ ಬಲವನ್ನು ಪದವೀಧರರು ಪರಿಗಣಿಸುವುದಿಲ್ಲ ಎಂಬ ಸಂದೇಶವನ್ನು ಮತದಾರರು ಕೊಡಬೇಕು.

ಕನ್ನಡಪ್ರಭ ವಾರ್ತೆ ಕನಕಪುರ

ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಹಗರಣಗಳು, ನಿರುದ್ಯೋಗ ಸಮಸ್ಯೆಗಳಿಂದ ಪದವೀಧರರ ಸ್ಥಿತಿ ಶೋಚನೀಯವಾಗಿದೆ. ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಪದವೀಧರ ಮತದಾರರು ನನಗೆ ಒಂದು ಅವಕಾಶ ಕೊಡಬೇಕು ಎಂದು ಪದವೀಧರ ಕ್ಷೇತ್ರದ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಆರ್. ಎಸ್. ಉದಯ್ ಸಿಂಗ್ ಮನವಿ ಮಾಡಿದರು.ನಗರದ ರೋಟರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಿಯಲ್ಲ, ನಾನು ಹೈಕೋರ್ಟ್ ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿದ್ದು, ಪದವೀಧರರ ಸಮಸ್ಯೆಗಳನ್ನು ಬಗೆಹರಿಸಬೇಕು, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು ಎಂಬುದು ನನ್ನ ಗುರಿ, ಕೆಪಿಎಸ್ಸಿಯಲ್ಲಿ ನೂರಾರು ಹಗರಣಗಳು ನಡೆದಿವೆ, ಅದರ ಪರಿಣಾಮ ಬಡವರು ಮತ್ತು ಮಧ್ಯಮ ವರ್ಗದ ಪದವೀಧರರ ಮೇಲೆ ಬೀಳುತ್ತಿದೆ, ಕೆಲವರು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುತ್ತೇನೆ ಎಂದು ಹಗಲುಗನಸು ಕಾಣುತ್ತಿದ್ದಾರೆ, ಬಿಜೆಪಿ ಅಭ್ಯರ್ಥಿಗೆ 6 ವರ್ಷಗಳ ಅವಕಾಶ ಕೊಟ್ಟಿದ್ದರೂ ಸಮಸ್ಯೆಗಳನ್ನು ಬಗೆಹರಿಸಲಿಲ್ಲ, ಈಗ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ 2012 ರಿಂದಲೂ ಕಣದಲ್ಲಿದ್ದಾರೆ, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ, ಈ ಸಮಸ್ಯೆ ವಿರುದ್ಧ ಅವರು ಎಷ್ಟು ದಿನ ಹೋರಾಡಿದ್ದಾರೆ? ಮತ್ತೆ ಚುನಾವಣೆಗೆ ಸ್ಪರ್ಧಿಸಲು ಇವರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಗಿಫ್ಟ್ , ಆಮಿಷಗಳನ್ನು ಒಡ್ಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಇತ್ತೀಚಿಗೆ ಗಿಫ್ಟ್ ಹಂಚುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಸಂವಿಧಾನ ನಮಗೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಲು ಮತದಾನದ ವಿಶೇಷ ಅಧಿಕಾರ ಕೊಟ್ಟಿದೆ, ಅದನ್ನು ಗಿಫ್ಟ್ ಕೊಟ್ಟು ಖರೀದಿಸಿ ಈ ಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿದ್ದಾರೆ.ಅದರ ಬದಲಾವಣೆಗಾಗಿ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ಆದ್ದರಿಂದ ನಿಮ್ಮ ಅಮೂಲ್ಯ ಮತವನ್ನು ನನಗೆ ಕೊಟ್ಟು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದರು.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ರಾವ್ ಅವರು ಒಂದು ಮತಕ್ಕೆ 5೦೦೦ ಕೊಟ್ಟು ಗೆಲ್ಲುತ್ತೇನೆ ಎಂದುಕೊಂಡಿದ್ದಾರೆ. ಅವರು ಯಾವ ರೀತಿ ಹಣ ಮಾಡಿದ್ದಾರೋ ತಿಳಿದಿಲ್ಲ, ಅವರು ಭ್ರಷ್ಟಾಚಾರ ಮಾಡಿ ತಂದ ಹಣವನ್ನು ಪದವೀಧರರಿಗೆ ಹಂಚಿ ಕ್ಷೇತ್ರಕ್ಕೆ ಕಳಂಕ ತರಲು ಹೊರಟಿದ್ದಾರೆ. ರಾಜ್ಯ ಸರ್ಕಾರ ಇವರ ಬೆನ್ನಿಗೆ ನಿಂತಿರುವುದು ದುರಂತ. ರಾಮೋಜಿ ಗೌಡ ಅವರನ್ನು ಚುನಾವಣಾ ಆಯೋಗ ಕಣದಿಂದ ನಿವೃತ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ದೇವೇಗೌಡ ಪದವೀಧರ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಕೇಳುವ ನೈತಿಕತೆಯಿಲ್ಲ. ನಿಮ್ಮ ಹಣ, ನಿಮ್ಮ ಅಧಿಕಾರದ ಬಲವನ್ನು ಪದವೀಧರರು ಪರಿಗಣಿಸುವುದಿಲ್ಲ ಎಂಬ ಸಂದೇಶವನ್ನು ಮತದಾರರು ಕೊಡಬೇಕು. ಉದಯ ಸಿಂಗ್ ಅವರು ವಕೀಲರಾಗಿ ಬಡವರ ಪರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ಉದಯ ಸಿಂಗ್ ರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಪದವೀಧರ ಕ್ಷೇತ್ರದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.

ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಭೀಮಲೇಶ್ ಕುಮಾರ್, ರಂಗ ನಿರ್ದೇಶಕ ನಾಗರಾಜು, ಮುಖಂಡ ಗೋಪಿ, ನವೀನ್, ಚಲವಾದಿ ನವೀನ್, ಸೇರಿ ಹಲವರು ಉಪಸ್ಥಿತರಿದ್ದರು.