ಮನೆಯ ಮಗನಾಗಿ ಸೇವೆ ಮಾಡಲು ಅವಕಾಶ ನೀಡಿ: ರಾಜಶೇಖರ ಹಿಟ್ನಾಳ

| Published : May 03 2024, 01:02 AM IST

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕ್ಷೇತ್ರದ ಕುರಿತು ತಮ್ಮ ಕನಸುಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.

ಮುಖಾಮುಖಿ – ರಾಜಶೇಖರ ಹಿಟ್ನಾಳ ಸಂದರ್ಶನ

-ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಧ್ಯೇಯ ಸಂದರ್ಶನ: ಸೋಮರಡ್ಡಿ ಅಳವಂಡಿ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಸತತ ಮೂರನೇ ಪ್ರಯತ್ನವಾಗಿ ಹಿಟ್ನಾಳ ಕುಟುಂಬ ಶಕ್ತಿಮೀರಿ ಶ್ರಮಿಸುತ್ತಿದೆ. ಅಭ್ಯರ್ಥಿ ರಾಜಶೇಖರ ಹಿಟ್ನಾಳ ತನ್ನೆಲ್ಲಾ ಶಕ್ತಿ ಧಾರೆ ಎರೆದು ಗೆಲುವಿಗಾಗಿ 2ನೇ ಬಾರಿ ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದ ಕುರಿತು ತಮ್ಮ ಕನಸುಗಳನ್ನು "ಕನ್ನಡಪ್ರಭ "ದೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮದು ಎರಡನೇ ಬಾರಿ, ತಮ್ಮ ಕುಟುಂಬದ್ದು ಮೂರನೇ ಬಾರಿ ಪ್ರಯತ್ನ, ಹೇಗನಿಸುತ್ತದೆ?

ಹೌದು, ಸತತ ಮೂರನೇ ಬಾರಿ ಪ್ರಯತ್ನ ಮಾಡುತ್ತಿದ್ದೇವೆ. ಈ ಬಾರಿ ಮತದಾರರು ಕೈ ಹಿಡಿದೇ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ತಂದೆಯವರು ಸ್ಪರ್ಧೆ ಮಾಡಿದಾಗ ಬಿಜೆಪಿಯವರು ಏನಾದರೂ ಮಾಡುತ್ತಾರೆ ಎಂದು ಗೆಲ್ಲಿಸಿದರು. ಮತ್ತೊಮ್ಮೆ ನಾನು ಸ್ಪರ್ಧೆ ಮಾಡಿದಾಗಲೂ ಈ ಬಾರಿಯಾದರೂ ಬಿಜೆಪಿ ಏನಾದರೂ ಮಾಡುತ್ತದೆ ಎಂದು ಪುನಃ ಗೆಲ್ಲಿಸಿದರು. ಏನೇನು ಮಾಡಲೇ ಇಲ್ಲ. ಹೀಗಾಗಿ, ಈ ಬಾರಿ ಮತದಾರರು ನಿರ್ಧಾರ ಮಾಡಿದ್ದಾರೆ, ಕಾಂಗ್ರೆಸ್ ಗೆಲ್ಲಿಸಲೇಬೇಕು ಎಂದು.ಯಾವ ಆಧಾರದಲ್ಲಿ ಗೆಲ್ಲುವುದಾಗಿ ಹೇಳುತ್ತಿರಿ?

ಜನತೆ ಹತ್ತು ವರ್ಷ ಬಿಜೆಪಿ ಆಡಳಿತ ನೋಡಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಹೇಗೆ ಆಡಳಿತ ಮಾಡಿದ್ದರು ಎನ್ನುವುದನ್ನುತುಲನೆ ಮಾಡಿ ನೋಡ್ತಾ ಇದ್ದಾರೆ. ಉದ್ಯೋಗ ಕೊಡಲು ಆಗಲಿಲ್ಲ. ಆರ್ಥಿಕವಾಗಿ ಬೆಳೆಸಲಿಲ್ಲ. ಯೋಜನೆ ಕೊಡಲಿಲ್ಲ.ಮತದಾರರ ಪ್ರತಿಕ್ರಿಯೆ ಹೇಗಿದೆ?

ಪ್ರಚಾರಕ್ಕೆ ಹೋದಾಗ ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ, ಸ್ವಾಗತಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಎರಡು ಕಾರ್ಯಕ್ರಮಗಳಲ್ಲಿಯೂ ನಿರೀಕ್ಷೆ ಮೀರಿ ಜನರು ಸೇರಿದ್ದಾರೆ. ಜನರಲ್ಲಿ ಕಂಗ್ರೆಸ್‌ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಬಗ್ಗೆ ಒಳ್ಳೆಯ ಭರವಸೆ ಇಟ್ಟುಕೊಂಡಿದ್ದಾರೆ.ಮೋದಿ ಅಲೆ ಬಗ್ಗೆ ಏನು ಹೇಳುತ್ತಿರಿ?

ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇಲ್ಲವೇ ಇಲ್ಲ. ಹೀಗಾಗಿ, ಗೆಲುವಿಗೆ ಅಡ್ಡಿಯಾಗುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಎರಡು ಚುನಾವಣೆಯಲ್ಲಿ ಅವರ ಅಲೆ ಇರುವುದು ಗೊತ್ತಾಗುತ್ತಿತ್ತು. ಆದರೆ, ಈ ಬಾರಿ ಅಂಥ ಯಾವ ಅಲೆಯೂ ಕಾಣಿಸುತ್ತಿಲ್ಲ.ಗ್ಯಾರಂಟಿ ಯೋಜನೆಗಳು ಕೈ ಹಿಡಿಯಬಹುದಾ?

ನಮ್ಮ ಗೆಲುವಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆಯಾಗಲಿವೆ. ಘೋಷಣೆ ಮಾಡಿರುವ ಅಷ್ಟು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಕೇವಲ 8 ತಿಂಗಳಲ್ಲಿಯೇ ಜಾರಿ ಮಾಡಿದೆ ಮತ್ತು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದೆ.

ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಮನೆಯ ಕರೆಂಟ್ ಬಿಲ್ ಉಚಿತಯಾಗಿದೆ. ಅಷ್ಟೇ ಯಾಕೆ, ಅವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಅಸಹಕಾರ ನೀಡಿದರೂ ಸಹ ರಾಜ್ಯ ಸರ್ಕಾರ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಿರುವುದು ವಿಶೇಷ. ಹಾಗೆಯೇ ಪದವಿ ಮತ್ತು ಡಿಪ್ಲೋಮಾ ಪದವಿ ಪಡೆದವರ ಖಾತೆಗೂ ಹಣ ಹಾಕುವ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇಂಥ ಗ್ಯಾರಂಟಿಗಳು ಹಿಂದೆಂದು ಇರಲಿಲ್ಲ ಮತ್ತು ಕೊಟ್ಟಿರುವ ಭರವಸೆಯನ್ನು ಇಷ್ಟು ಬೇಗ ಈಡೇರಿಸಿರಲಿಲ್ಲ. ಹೀಗಾಗಿ, ಮತದಾರರು ಅತ್ಯಂತ ಸಂತೋಷವಾಗಿದ್ದಾರೆ. ಕಾಂಗ್ರೆಸ್ ಮೇಲೆ ವಿಶ್ವಾಸ ಡಬಲ್ ಆಗಿದೆ. ಅವರೇ ಸ್ವಯಂ ಪ್ರೇರಿತವಾಗಿ ಈ ಬಾರಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತಾರೆ. ಇದು ನಮ್ಮ ಗೆಲುವಿನ ಅಂತರವನ್ನು ಹೆಚ್ಚಳ ಮಾಡಲಿದೆ. ಇದರ ಜೊತೆಗೆ ಈಗಲೂ ಸಹ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಜಾರಿ ಮಾಡಿಯೇ ಮಾಡುತ್ತಾರೆ ಎನ್ನುವ ವಿಶ್ವಾಸ ಬಂದಿರುವುದರಿಂದ ಲೋಕಸಭಾ ಚುನಾವಣೆಯಲ್ಲಿಯೂ ಮತದಾರರು ಬೆಂಬಲಿಸುತ್ತಾರೆ.ಕ್ಷೇತ್ರದ ಕುರಿತು ನಿಮ್ಮ ಕನಸುಗಳೇನು?

ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದ್ದು, ನವಲಿ ಸಮಾಂತರ ಜಲಾಶಯ ನಿರ್ಮಾಣ ಮಾಡಲಾಗುವುದು. ಹೆದ್ದಾರಿಗಳ ಸಂಪರ್ಕ, ವಿಮಾನ ನಿಲ್ದಾಣ, ರೈಸ್ ಪಾರ್ಕ್ ನಿರ್ಮಾಣ, ಇನ್ನಷ್ಟು ಕೈಗಾರಿಕೆಗಳ ಸ್ಥಾಪನೆಗೆ ಒತ್ತು.ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ಸಿಗೆ ಆಗಮಿಸಿದ್ದು, ಅನುಕೂಲ ಆಗುತ್ತಾ?

ಖಂಡಿತ ಆಗಿದೆ. ಅವರು ಜನರ ಮಧ್ಯೆ ಇದ್ದವರು. ಹೀಗಾಗಿ, ಅವರು ಪಕ್ಷ ಸೇರ್ಪಡೆಯಾಗಿದ್ದರಿಂದ ನಮಗೆ ಪ್ಲಸ್ ಆಗಿದೆ. ನಿಮ್ಮ ಎದುರಾಳಿ ಹೊಸ ಮುಖ ಹಾಗೂ ಡಾಕ್ಟರ್ ಬೇರೆ, ಹೇಗೆ ಎದುರಿಸುತ್ತಿರಿ?

ಎದುರಾಳಿ ಎನ್ನುವುದಕ್ಕಿಂತ ಇಲ್ಲಿ, ವ್ಯಕ್ತಿಗತ ಚುನಾವಣೆ ಇರುವುದಿಲ್ಲ, ಬಿಜೆಪಿ ವಿರುದ್ಧ ನಮ್ಮ ಹೋರಾಟ ಇರುತ್ತದೆ.ಗಂಗಾವತಿ ಭಿನ್ನಾಭಿಪ್ರಾಯ ಅಡ್ಡಿಯಾಗುವುದಿಲ್ಲವೇ?

ಗಂಗಾವತಿಯಲ್ಲಿ ಭಿನ್ನಾಭಿಪ್ರಾಯ ಅಂತಾ ಇಲ್ಲ, ರಾಜಕೀಯ ಪಕ್ಷದಲ್ಲಿ ಇದೆಲ್ಲ ಸಹಜ. ಸಮರ್ಪಕವಾಗಿ ನಿಭಾಯಿಸಿದ್ದು, ಎಲ್ಲರೂ ಒಗ್ಗೂಡಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ.ಕಿಷ್ಕಿಂಧೆ ಜಿಲ್ಲೆಗೆ ಬೆಂಬಲ ನೀಡಿದ್ದೀರಿ?

ಕಿಷ್ಕಿಂಧೆ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ತ್ವರಿತವಾಗಿ ಅಭಿವೃದ್ಧಿಯಾಗಬೇಕು ಎನ್ನುವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ನಾನು ಸಹ ಅದಕ್ಕೆ ಬೆಂಬಲಿಸಿದ್ದೇನೆ.ನಿಮ್ಮನ್ನೇ ಯಾಕೆ ಗೆಲ್ಲಿಸಬೇಕು?

ಸತತವಾಗಿ 20 ವರ್ಷಗಳ ಕಾಲ ನಾನು ರಾಜಕೀಯದಲ್ಲಿ ಇದ್ದೇನೆ ಮತ್ತು ಜನರ ಸೇವೆ ಮಾಡಿಕೊಂಡೇ ಇದ್ದೇನೆ. ಹೀಗಾಗಿ, ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆಯಿಂದ ಸ್ಪರ್ಧೆ ಮಾಡಿದ್ದೇನೆ. ಇನ್ನಷ್ಟು ಸೇವೆಗಾಗಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದೇನೆ. ನಿಮ್ಮದೂ ಕುಟುಂಬ ರಾಜಕಾರಣವಲ್ಲವೇ?

ಕುಟುಂಬ ರಾಜಕಾರಣ ಎನ್ನುವುದು ಅಪ್ರಸ್ತುತ. ಕುಟುಂಬ ರಾಜಕಾರಣ ಯಾರು ಮಾಡುತ್ತಿಲ್ಲ ಹೇಳಿ? ಬಿಜೆಪಿಯಲ್ಲಿ ಇಲ್ಲವೇ, ಅಲ್ಲೂ ಇದೆ. ಅವರವರ ಮನೆಯಲ್ಲಿ ಯಾವ ಕೆಲಸ ಮಾಡಿಕೊಂಡಿರುತ್ತಾರೆ ಅದನ್ನೇ ಅವರ ಮನೆಯ ಪೀಳಿಗೆ ರೂಢಿಸಿಕೊಂಡಿರುತ್ತದೆ. ವೈದ್ಯರ ಮಗ ವೈದ್ಯನಾಗುತ್ತಾನೆ, ಕಲಾವಿದರ ಮಕ್ಕಳು ನಟರಾಗುತ್ತಾರೆ. ಅದರಲ್ಲಿ ಏನು ವಿಶೇಷ ಇಲ್ಲ. ನಮ್ಮ ಮನೆಯಲ್ಲಿ ರಾಜಕಾರಣ ಮಾಡುತ್ತಾರೆ, ಅದುವೆ ನಮಗೆ ಬಂದಿದೆ.ಮತದಾರರಲ್ಲಿ ತಮ್ಮ ಕೋರಿಕೆ?

ಈಗಗಾಲೇ ನಮ್ಮ ಕುಟುಂಬಕ್ಕೆ ಎರಡು ಬಾರಿ ಸೋಲಾಗಿದೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲಾಗಿದೆ. ಈ ಬಾರಿ ನನಗೆ ಎಲ್ಲರೂ ಅವಕಾಶ ಮಾಡಿಕೊಟ್ಟು, ಅತೀ ಹೆಚ್ಚು ಅಂತರದಿಂದ ಗೆಲ್ಲುವಂತೆ ಮಾಡಬೇಕು. ಅವಕಾಶ ಮಾಡಿಕೊಟ್ಟರೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ, ಮನೆಯ ಮಗನಾಗಿ ಸೇವೆ ಸಲ್ಲಿಸುತ್ತೇನೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುತ್ತೇನೆ ಎಂದು ಹೇಳಬಯಸುತ್ತೇನೆ.