ಸಾರಾಂಶ
2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗೆ ಮರು ದಾಖಲಾಗಲು ಅವಕಾಶ ನೀಡಲಾಗಿದೆ.
ಹಿರಿಯೂರು : 2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗೆ ಮರು ದಾಖಲಾಗಲು ಅವಕಾಶ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಗಿರೀಶ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ 20 ಅಂಶದ ಕಾರ್ಯಕ್ರಮಗಳ ಕುರಿತು ಅವರು ಮಾತನಾಡಿದರು.
ಕಳೆದ 2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಮರು ದಾಖಲಾಗಿ ಸಾಮಾನ್ಯ ತರಗತಿಯಲ್ಲಿ ಅಭ್ಯಾಸ ಮಾಡಲು ಸರ್ಕಾರ ಅವಕಾಶ ಒದಗಿಸಿದೆ. ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಸರ್ಕಾರ 20 ಅಂಶಗಳ ಕಾರ್ಯಕ್ರಮ ರೂಪಿಸಿದ್ದು ಅವುಗಳಲ್ಲಿ ವಿಶೇಷ ತರಗತಿ, ಗುಂಪು ಅಧ್ಯಯನ, ಶಿಕ್ಷಕರಿಗೆ ಮಕ್ಕಳನ್ನು ದತ್ತು ನೀಡುವುದು, ಮನೆ ಭೇಟಿ, ಡಿಸೆoಬರ್ ಅಂತ್ಯದೊಳಗೆ ಪಠ್ಯ ಪೂರ್ಣಗೊಳಿಸುವುದು, ನಿಧಾನಗತಿಯ ವಿದ್ಯಾರ್ಥಿಗಳನ್ನು ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳ ಜೊತೆ ಸಂಯೋಜಿಸುವುದು, ಪೋಷಕರ ಸಭೆ ನಡೆಸುವುದು ಪ್ರಮುಖವಾದವುಗಳಾಗಿವೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸಲು ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ದಸರಾ ರಜೆ ಸದ್ಭಳಕೆ ಮಾಡಿಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅ.01-2024 ರಿಂದ ಅ.06-2024 ರವರೆಗೆ 6 ದಿನಗಳ ಕಾಲ ಕ್ರಾಶ್ ಕೋರ್ಸ್ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಟಾರ್ಗೆಟ್ 50 ಪಾಸಿಂಗ್ ಪ್ಯಾಕೇಜ್ ನಲ್ಲಿನ ಇದುವರೆಗೂ ಭೋಧಿಸಲಾದ ವಿಷಯವನ್ನು ಪುನರ್ ಮನನ ಮಾಡಲಾಗುವುದು ಹಾಗೂ ನಿಧಾನಗತಿಯ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕಲಿಕೆ ಉಂಟು ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಈ ತಿಪ್ಪೇರುದ್ರಪ್ಪ, ಎನ್‌ಎಂಎಂಎಸ್ ಜಿಲ್ಲಾ ನೋಡಲ್ ಅಧಿಕಾರಿ ರೇವಣ್ಣ ಹಾಗೂ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಇಸಿಒಗಳು ಇದ್ದರು.