ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಲ ಮೂಲಗಳು ಜೀವ ಕಳೆಯನ್ನು ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಪುಟ್ಟ ಜಲಾಶಯ ಎಂದೇ ಕರೆಯಲಾಗುವ ಚಿಕ್ಲಿಹೊಳೆ ಕೂಡ ಮೈದುಂಬಿದ್ದು, ಭಾನುವಾರ ಜಲಾಶಯಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿ ಜಲಾಶಯದ ಸೊಬಗನ್ನು ಸವಿದರು.
ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಹಾರಂಗಿ ಜಲಾಶಯದ ನೀರನ್ನು ನದಿಗೆ ಹರಿಸಲಾಯಿತು.ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಭಾನುವಾರ ಸಂಜೆ 6 ಗಂಟೆ ವೇಳೆಗೆ ನೀರಿನ ಮಟ್ಟ 2854.65 ಅಡಿಗಳಷ್ಟಿತ್ತು. ಕಳೆದ ವರ್ಷ ಜು.22ರಂದು ಹಾರಂಗಿ ಭತಿರ್ಯಾಗಿತ್ತು. ಈ ಬಾರಿ ಬೇಗನೆ ಭರ್ತಿಯಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ಇನ್ನೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಹಾರಂಗಿ ಜಲನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಶೀಘ್ರವೇ ಗರಿಷ್ಟ ಮಟ್ಟ ತಲುಪುವ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ಹಾರಂಗಿ ಮತ್ತು ಕಾವೇರಿ ನದಿ ಪಾತ್ರದಲ್ಲಿರುವ ನದಿಯ ಎರಡು ದಂಡೆಯಲ್ಲಿ ವಾಸಿಸುವ ಜನರು ಮುಂಜಾಗ್ರತೆ ವಹಿಸುವಂತೆ ಹಾರಂಗಿ ಪುನರ್ವಸತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.ಭಾನುವಾರ ಬೆಳಗ್ಗೆ 11 ಗಂಟೆ ವೇಳೆಗೆ ಹಾರಂಗಿಗೆ ಸುಮಾರು 7,720 ಕ್ಯೂಸೆಕ್ ನೀರು ಒಳಹರಿವು ಬಂದಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಹಾರಂಗಿಯಿಂದ ಸುಮಾರು 4000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಈ ಸಂದರ್ಭ ಒಳಹರಿವು 4,520 ಇತ್ತು. 1 ಗಂಟೆ ವೇಳೆಗೆ ಒಳ ಹರಿವು 6820 ಕ್ಯೂಸೆಕ್ ಇತ್ತು. ಸಂಜೆ 6 ಗಂಟೆ ವೇಳೆಗೆ ಸುಮಾರು 5000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು.
ಹಾರಂಗಿಯಿಂದ ನದಿಗೆ ನೀರು ಹರಿಸುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇರಲಿಲ್ಲ. ಇದರಿಂದ ಹಾರಂಗಿಯಲ್ಲಿ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಕಂಡುಬಂತು.* ಪ್ರವಾಸಿಗರ ದಂಡು: ಮಿನಿ ನಯಾಗರ ಎಂದೇ ಕರೆಯಲಾಗುವ ಚಿಕ್ಲಿಹೊಳೆ ಜಲಾಶಯದಲ್ಲಿ ಭಾನುವಾರ ಬೆಳಗ್ಗಿನಿಂದಲೂ ಪ್ರವಾಸಿಗರ ದಂಡೇ ಹರಿದು ಬಂದಿತು. ರಸ್ತೆ ಮಾರ್ಗದುದಕ್ಕೂ ಪ್ರವಾಸಿಗರ ವಾಹನಗಳೇ ಕಂಡುಬಂದವು.
ಕೇವಲ ಒಂದು ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯ ಸುತ್ತಮುತ್ತಲೂ ಹಸಿರ ಕಾನನದ ಬೆಟ್ಟ ಗುಡ್ಡಗಳಿಂದ ಆವೃತವಾಗಿದೆ. ಇದನ್ನು ನೋಡಲು ಈಗ ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಜಲಾಶಯದ ಸುತ್ತಲೂ ಇರುವ ಹಸಿರ ಕಾನನದ ಬಣ್ಣ ಜಲಾಶಯದಲ್ಲಿ ಬೆರೆತು ಇಡೀ ನೀರೇ ಹಚ್ಚ ಹಸಿರಿನಂತೆ ಭಾಸವಾಗುತ್ತಿದೆ. ಒಂದೆಡೆ ಹಸಿರ ಕಾನನವಿದ್ದರೆ ಮಗದೊಂದೆಡೆ ಪ್ರಶಾಂತವಾಗಿರುವ ಜಲಾಶಯ ತುಂಬಿ ಎಲ್ಲರ ಕಣ್ಮನ ಸೆಳೆಯುತ್ತಿದೆ.ಚಿಕ್ಲಿಹೊಳೆಯಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ದೃಶ್ಯ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿನ ವೀಕ್ಷಣಾ ಸ್ಥಳದಿಂದ ನಿಂತು ಪ್ರವಾಸಿಗರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು. ಚಿಕ್ಲಿಹೊಳೆ ರಸ್ತೆ ಮಾರ್ಗದಲ್ಲಿ ಬಸ್‌ಗಳಲ್ಲಿ ಕೂಡ ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಈ ವರ್ಷದ ಬೇಸಗೆಯಲ್ಲಿ ಚಿಕ್ಲಿಹೊಳೆ ಜಲಾಶಯ ಬಹುತೇಕ ಖಾಲಿಯಾಗಿತ್ತು. ಪುರಾತನ ದೇವಾಲಯವೂ ಕಾಣುತ್ತಿತ್ತು.ಈ ಬಾರಿ ಜುಲೈ ತಿಂಗಳಿನಲ್ಲಿಯೇ ಜಲಾಶಯ ತುಂಬಿದ್ದು, ಇನ್ನೂ ಎರಡು ತಿಂಗಳ ಕಾಲ ಸಾಕಷ್ಟು ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ನಿರೀಕ್ಷೆಯೂ ಇದೆ. ಇದರಿಂದ ಗುಡ್ಡೆಹೊಸೂರು, ಬೆಟ್ಟಗೇರಿ, ಬೆಂಡೆಬೆಟ್ಟ, ರಂಗಸಮುದ್ರ ಸೇರಿದಂತೆ ಮತ್ತಿತರ ಗ್ರಾಮದ ಕೃಷಿಕರು ಸಂತಸದಲ್ಲಿದ್ದಾರೆ.
-----ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ. 2,859 ಅಡಿಗಳು ಗರಿಷ್ಟ ಮಟ್ಟವಾಗಿದ್ದು, ಈಗಾಗಲೇ 2854.65 ಅಡಿಗಳಷ್ಟು ನೀರು ತುಂಬಿದೆ. ಮುಂಜಾಗ್ರತಾ ಕ್ರಮವಾಗಿ ನೀರನ್ನು ನದಿಗೆ ಹರಿಸಿದ್ದೇವೆ. ಕಳೆದ ವರ್ಷ ಜು.22ಕ್ಕೆ ಜಲಾಶಯ ತುಂಬಿತ್ತು. ಈ ಬಾರಿ ಬೇಗ ತುಂಬಿದೆ. ಇನ್ನೂ ಜಿಲ್ಲೆಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
। ಪುಟ್ಟಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ಹಾರಂಗಿ---------
ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ವಾರಾಂತ್ಯದಲ್ಲಿ ಸುಮಾರು 25ರಿಂದ 30 ಸಾವಿರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ.। ಮೇದಪ್ಪ, ರಕ್ಷಣಾ ಸಿಬ್ಬಂದಿ ಚಿಕ್ಲಿಹೊಳೆ ಜಲಾಶಯ