ಸಾರಾಂಶ
ಶಿಗ್ಗಾಂವಿ: ಮಕ್ಕಳಿಗೆ ವಿದ್ಯೆ ಜೊತೆಗೆ ವಿವಿಧ ರೀತಿಯ ಕೌಶಲ್ಯ ಹಾಗೂ ಹಿರಿಯರನ್ನು ಗೌರವಿಸುವ ಮಾನವೀಯ ಗುಣಗಳನ್ನು ಬೆಳೆಸುವ ಶಿಕ್ಷಣ ನೀಡಿ ಎಂದು ವೇದ ಮಾತಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.ತಾಲೂಕಿನ ತಡಸ ಕ್ರಾಸ್‌ನಲ್ಲಿರುವ ಗ್ರಾಮದ ಗಾಯತ್ರಿ ತಪೋ ವನದ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಅಕ್ಷರ ಅಭ್ಯಾಸ ಹಾಗೂ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಿರುವ ಮಕ್ಕಳು ಪರಸ್ಪರ ಸಂಬಂಧಗಳನ್ನು ಅರಿಯದ ಸ್ಥಿತಿಗೆ ತಲುಪಿದ್ದಾರೆ. ಶಾಲೆಗಳು ಮಕ್ಕಳ ಸಮಗ್ರ ಜೀವನದ ಪಾಠಶಾಲೆಯಾಗಬೇಕು ಎಂದರು.ಬಳಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ, ವಿನಾಯಕ ಕುಲಕರ್ಣಿ ಸಮ ಸಮಾಜ ಹಾಗೂ ಪ್ರಗತಿಯ ಹಾದಿಯಲ್ಲಿ ಮಕ್ಕಳು ಬೆಳೆಯುವುದರ ಜೊತೆಗೆ ತಮ್ಮ ಆರೋಗ್ಯ ಹಾಗೂ ದೈಹಿಕ ಬೆಳವಣಿಗೆಯನ್ನು ಮಾಡಿಕೊಂಡು ಶಿಕ್ಷಣ ಪಡೆಯಬೇಕು ಎಂದರು.ನಂತರ ಮಾತನಾಡಿದ ಗಾಯತ್ರಿ ತಪೂ ಭೂಮಿ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿ ರಾಘವೇಂದ್ರ ಪಾಲನಕರ ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ದೂರವಿರಿಸಿ ಸಮಗ್ರ ಸಮಾಜ ಏಕತೆಯ ಭಾವನೆ ಬೆಳೆಸಬೇಕು ಹಾಗೂ ಅಧ್ಯಾತ್ಮದ ಪರಿಕಲ್ಪನೆ ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸುವ ಕಾರ್ಯ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಅಧಿಕಾರಿ ಮಂಜುನಾಥ್ ಎಸ್. ಹಿರೇಮಠ ಹಾಗೂ ಮುಖ್ಯ ಶಿಕ್ಷಕ ಸಹ ಶಿಕ್ಷಕರು ಪಾಲಕರು ಇದ್ದರು.