Along with planting saplings, conservation is important
ಚಕ್ರ ಅರಣ್ಯ ತರಬೇತಿ ಕೇಂದ್ರದ ನೂತನ ವನಪಾಲಕರಿಗೆ ನಡೆದ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಸಿರಾಜ್ಯದ ಮುಂದಿನ 35 ವರ್ಷಗಳ ಅರಣ್ಯ ಭವಿಷ್ಯ ಇಲಾಖೆಯ ಸಿಬ್ಬಂದಿಯ ಕಾರ್ಯತತ್ಪರತೆ ಮೇಲೆ ನಿಂತಿದೆ. ಪ್ರತಿ ವರ್ಷ ಪ್ರತಿಯೊಬ್ಬರೂ ಈ ವನ್ಯ ಸಂಕುಲ, ಭೂಮಿ ಪ್ರೀತಿಗೆ ವೈಯಕ್ತಿಕವಾಗಿ 365 ಹಣ್ಣು ಹಂಪಲು ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕೆಂದು ಕೃಷಿ ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದ್ದಾರೆ.
ತಾಲೂಕಿನ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಶುಕ್ರವಾರ ಚಕ್ರ ಅರಣ್ಯ ತರಬೇತಿ ಕೇಂದ್ರದ ನೂತನ ವನಪಾಲಕರಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಕಳವೆ ಮಾತನಾಡಿದರು.ಮುಂಬಯಿ ಸಸ್ಯಗಾರ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿಬ್ಸನ್ ರನ್ನು ಮುಂಬಯಿ ಸಂಸ್ಥಾನದ ಅರಣ್ಯ ಇಲಾಖೆ ಮುಖ್ಯಸ್ಥರನ್ನಾಗಿ ಮಾಡುವ ಮೂಲಕ ಭಾರತದಲ್ಲಿ ಪ್ರತ್ಯೇಕ ಅರಣ್ಯ ಇಲಾಖೆ 1847ರಲ್ಲಿ ಆರಂಭವಾಯಿತು. ಹಲವು ಬ್ರಿಟಿಷ್ ಅಧಿಕಾರಿಗಳು ತೋರಿದ ದೂರದರ್ಶಿತ್ವ ಪರಿಣಾಮ ಅರಣ್ಯ ಕಾರ್ಯ ಯೋಜನೆ ಮೂಲಕ ನಿರ್ವಹಣೆಯ ವೈಜ್ಞಾನಿಕ ದಾರಿ ತೆರೆದುಕೊಂಡಿತು. ಬ್ರಿಟಿಷ್ ಕಾಲದ ದಾಖಲೆ ಓದಿದರೆ ನಮ್ಮ ಅರಣ್ಯ ಚರಿತ್ರೆ ಅರ್ಥವಾಗುತ್ತದೆ. 1857ರ ಚಳವಳಿ ತರುವಾಯ ಜನರ ದಂಗೆ ನಿಯಂತ್ರಿಸಲು ರಸ್ತೆ, ರೈಲು ಮಾರ್ಗ ಅಭಿವೃದ್ಧಿ ಶುರುವಾಯಿತು. ಘಟ್ಟ ಹಾಗೂ ಕರಾವಳಿ ರಸ್ತೆಗಳು ಆದವು. ಅಲ್ಲಿಂದ ಅರಣ್ಯದ ಮೇಲೆ ಪರಿಣಾಮಗಳು ಶುರುವಾದವು. ನದಿ ಕಣಿವೆಯಲ್ಲಿ ಬ್ರಿಟಿಷರಿಗಾಗಿ ತೇಗ ಬೆಳೆಸಲು ಆರಂಭವಾದ ಇಲಾಖೆ ಮುಂದೆ ಅರಣ್ಯಾಧಾರಿತ ಕೈಗಾರಿಕೆಗೆ ನೆಡುತೋಪು ಬೆಳೆಸುವ ಕಾರ್ಯ ಮಾಡಿದೆ. ಈಗ ವನ್ಯ ಜೀವಿಗಳ ಸಂರಕ್ಷಣೆ, ಜೀವ ವೈವಿಧ್ಯ ರಕ್ಷಣೆಗೆ ಸ್ಥಳೀಯ ಸಸ್ಯ ಅಭಿವೃದ್ಧಿಗೆ ಮಹತ್ವ ನೀಡಬೇಕು. ಆದಾಯಕ್ಕಾಗಿ ಅರಣ್ಯ ಬೆಳೆಸುವ ಬದಲು ಸಂರಕ್ಷಣೆಗೆ ಅರಣ್ಯ ಉಳಿಸುವ ಕಾರ್ಯ ಮುಖ್ಯವಾಗಬೇಕು ಎಂದರು.
ಕಳವೆ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆಯ ಪ್ರಯತ್ನ ಫಲವಾಗಿ ಇಲ್ಲಿನ ಸೊಪ್ಪಿನ ಬೆಟ್ಟ ಹಾಗೂ ಸಾವಿರಾರು ಎಕರೆ ಅರಣ್ಯಪ್ರದೇಶ ಸಮೃದ್ಧವಾಗಿದೆ. ಕಳೆದ 30 ವರ್ಷಗಳ ಸೆಟಲೈಟ್ ಚಿತ್ರಗಳು ಇಲ್ಲಿನ ಪರಿಸರ ಬದಲಾವಣೆಗೆ ಸಾಕ್ಷಿಯಾಗಿವೆ. ಇಲ್ಲಿನ ಪ್ರತಿ ಎಕರೆಯಲ್ಲಿ ಒಂದು ಮಳೆಗಾಲದಲ್ಲಿ 85 ಲಕ್ಷ ಲೀ. ಮಳೆ ನೀರು ಬೀಳುತ್ತದೆ. 2004-05ರ ಕಾಲದಲ್ಲಿಯೇ ಸೊಪ್ಪಿನ ಬೆಟ್ಟದಲ್ಲಿ ನೆಲ ಜಲ ಸಂರಕ್ಷಣೆ ಮಾದರಿ ಬಗ್ಗೆ ವಿಶೇಷ ಗಮನ ನೀಡಿದ ಪರಿಣಾಮವಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಕಳೆದ 20 ವರ್ಷಗಳಿಂದ ಇಲ್ಲಿನ ಬೆಟ್ಟ ಮಾದರಿ ದರ್ಶನಕ್ಕೆ ವನಪಾಲಕ, ವನರಕ್ಷಕ ಸಿಬ್ಬಂದಿ ತರಬೇತಿ ಸಮಯದ ಕ್ಷೇತ್ರ ಭೇಟಿಗೆ ಬರುತ್ತಿದ್ದಾರೆ ಎಂದರು.ಅರಣ್ಯ ಅಭಿವೃದ್ಧಿ ಎಂದರೆ ಸಸಿ ನೆಡುವುದು ಮಾತ್ರವಲ್ಲ, ಜನರ ದೇಸಿ ಅರಣ್ಯ ಜ್ಞಾನದ ಮೂಲಕ ನಾವು ಸಂರಕ್ಷಣೆಯ ಪರಿಣಾಮಕಾರಿ ಮಾರ್ಗ ಅನುಸರಿಸಬೇಕಿದೆ ಎಂದರು. ತರಬೇತಿ ಕೇಂದ್ರದ ವಲಯ ಅರಣ್ಯಾಧಿಕಾರಿಗಳಾದ ನರೇಶ್ ಎಂ.ವಿ., ಹನುಮಂತರಾಯ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಇದ್ದರು.
