ಧರ್ಮಾಚರಣೆಯ ಜೊತೆಗೆ ಅರಿವು, ಆರೋಗ್ಯ ಅಗತ್ಯ: ರಂಭಾಪುರೀ ಶ್ರೀಗಳ

| Published : Dec 01 2023, 12:45 AM IST

ಧರ್ಮಾಚರಣೆಯ ಜೊತೆಗೆ ಅರಿವು, ಆರೋಗ್ಯ ಅಗತ್ಯ: ರಂಭಾಪುರೀ ಶ್ರೀಗಳ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಾಚರಣೆಯ ಜೊತೆಗೆ ಅರಿವು, ಆರೋಗ್ಯ ಅಗತ್ಯ: ರಂಭಾಪುರೀ ಶ್ರೀಶಂಕರಸ್ವಾಮಿ ದೀಪೋತ್ಸವಕ್ಕೆ ರಂಭಾಪುರಿ ಜಗದ್ಗುರುಗಳ ಚಾಲನೆ

ಶಂಕರಸ್ವಾಮಿ ದೀಪೋತ್ಸವಕ್ಕೆ ರಂಭಾಪುರಿ ಜಗದ್ಗುರುಗಳ ಚಾಲನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರ

ಧರ್ಮಾಚರಣೆ ಜೊತೆಗೆ ಅರಿವು, ಆರೋಗ್ಯ, ಆಯುಷ್ಯ ಪ್ರತಿ ಮನುಷ್ಯನಿಗೂ ಅಗತ್ಯ. ಬೆಳಗು ಜೀವಾತ್ಮರಿಗೆ ಪ್ರಾಪ್ತವಾಗಬೇಕೆಂಬುದು ಎಲ್ಲ ಮಠ ಪೀಠಗಳ ಆಶಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಆರದವಳ್ಳಿ ಸಮೀಪದ ಶಂಕರದೇವರ ಮಠದಲ್ಲಿ ಬುಧವಾರ ಸಂಜೆ ನಡೆದ ಶ್ರೀಗುರು ಶಂಕರಸ್ವಾಮಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿ, ಹೊರಗಿರುವ ಕತ್ತಲೆ ದೂರವಾಗುವುದರ ಜೊತೆಗೆ ಒಳಗಿನ ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನದ ಬೆಳಕು ಅರಿಯ ಬೇಕೆಂಬುದೇ ದೀಪೋತ್ಸವ ಎಂದರು.

ಆಧುನಿಕತೆ, ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಪರಂಪರೆ ಕಲುಷಿತ ವಾಗುತ್ತಿದೆ. ಬೆಳೆಯುವ ಪೀಳಿಗೆಯಲ್ಲಿ ಯೋಗ್ಯ ಸಂಸ್ಕಾರ ಮಾರ್ಗದರ್ಶನದ ಕೊರತೆ ಕಾಡುತ್ತಿದ್ದು ಅವರ ಜೀವನ ಅವನತಿಯತ್ತ ಸಾಗುತ್ತಿದೆ. ಸತ್ಯ ಶುದ್ಧವಾದ ಧರ್ಮದ ತತ್ತ್ವಸಿದ್ಧಾಂತ ಮನವರಿಕೆ ಮಾಡಿ ಕೊಡುವ ಮೂಲಕ ವಿಶೇಷವಾಗಿ ಯುವ ಜನರನ್ನು ಜಾಗೃತಿಗೊಳಿಸುವ ಕಾರ್‍ಯ ಹಿಂದೆಂದಿಗಿಂತ ಇಂದು ಅಗತ್ಯವಾಗಿದೆ ಎಂದು ಹೇಳಿದರು.

ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಸಾವಿನಿಂದ ಸಾವಿಲ್ಲದ ಕಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಕರ್ತವ್ಯ. ಧರ್ಮ ವೇದಿಕೆ ಮೇಲಿನ ಮಾತಲ್ಲ. ಆಡಿದ ಮಾತಿ ನಂತೆ ನಡೆಯುವುದೇ ನಿಜ ಧರ್ಮ. ಮಾತು ತಪ್ಪುವುದರಿಂದಲೇ ಧರ್ಮ ಸೇರಿದಂತೆ ಎಲ್ಲ ರಂಗಗಳಲ್ಲಿ ಅರಾಜಕತೆ, ಅಸ್ತವ್ಯಸ್ಥತೆ ಕಾಣುತ್ತಿದೆ. ಬದುಕು ಬದಲಾಗಬೇಕಾದರೆ ದಾರಿಯನ್ನು ಬದಲಾಯಿಸಿ ಕೊಳ್ಳಬೇಕು ಎಂದ ಜಗದ್ಗುರುಗಳು, ಸದ್ವಿಚಾರಗಳನ್ನು ಮರೆಯುವುದು ಮನುಷ್ಯ ಸ್ವಭಾವ. ಮರೆತದ್ದನ್ನು ನೆನಪಿಸಲು ಗುರು ಬೋಧನೆ ಅಗತ್ಯ ಎಂದರು.

ಸದೃಢ ಆರೋಗ್ಯ ಬದುಕಿನಲ್ಲಿ ಆಸಕ್ತಿ ಲವಲವಿಕೆ ತರುತ್ತದೆ. ಆರೋಗ್ಯವೇ ದೊಡ್ಡ ಸಂಪತ್ತು. ಧರ್ಮ ಸಾಧನೆಗೂ ಆರೋಗ್ಯ ಅವಶ್ಯ. ಋಷಿಮುನಿಗಳು ಆಚಾರ್ಯರರು ಉತ್ತಮ ಸಂದೇಶ ನೀಡಿದ್ದಾರೆ. ಜಗದ ಕತ್ತಲೆಯನ್ನು ಸೂರ್‍ಯ ಕಳೆದರೆ, ಅಂತರಂಗದ ಕತ್ತಲೆಯನ್ನು ಶ್ರೀಗುರು ಕಳೆಯಬಲ್ಲ ಎಂದು ಶಾಸ್ತ್ರ ಸಿದ್ಧಾಂತಗಳು ಸಾರಿವೆ. ಶಿವಪಥ ಅರಿಯಲು ಗುರುಪಥವೇ ಮೊದಲು ಎಂದು ಭಕ್ತಿ ಭಂಡಾರಿ ಬಸವಣ್ಣ ನವರ ಮಾತುಗಳನ್ನು ಉಲ್ಲೇಖಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜನರಿಗೆ ನಿಜ ಧರ್ಮದ ಬೋಧನೆಗೆ ಅತಿ ಹೆಚ್ಚು ಪ್ರವಾಸ ಮಾಡುವ ಪೂಜ್ಯರೆಂದು ರಂಭಾಪುರಿ ಜಗದ್ಗುರುಗಳು ಹೆಸರಾಗಿದ್ದಾರೆ. ವೀರಶೈವ ಲಿಂಗಾಯಿತ ಧರ್ಮದ ಜಾಗೃತಿಗೆ ಶ್ರಮಿಸುತ್ತಿದ್ದಾರೆ. ಹಣತೆ, ಕಗ್ಗತ್ತಲನ್ನು ದೂರ ಮಾಡುವಂತೆ ಅಂಧಕಾರ ದೂರಮಾಡುವಲ್ಲಿ ಪೀಠ ಮಠಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಪರಿಷತ್ತಿನ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಕಾರ್‍ಯಗಳಲ್ಲಿ ಶಂಕರದೇವರ ಮಠ ಮುಂದಾಗಿ ಭಕ್ತರ ಮನದಲ್ಲಿ ಉಳಿದಿದೆ. ರಂಭಾಪುರಿ ಮತ್ತು ಶೃಂಗೇರಿ ಎರಡು ರಾಷ್ಟ್ರೀಯ ಪೀಠಗಳನ್ನು ಹೊಂದಿರುವ ಜಿಲ್ಲೆ ಇದಾಗಿದೆ ಎಂದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಆಯುರ್ವೇದ ವೈದ್ಯಕೀಯ ಕಾಲೇಜು ಉಪನ್ಯಾಸಕರಾದ ಹಾವೇರಿ ಗೌರಿ ಮಠಾಧ್ಯಕ್ಷ ಶ್ರೀಶಿವಯೋಗಿ ಶಿವಾಚಾರ್ಯರು, ರಟ್ಟೆಹಳ್ಳಿ ಕಬ್ಬಿಣಕಂತೆ ಮಠಾಧ್ಯಕ್ಷ ಶ್ರೀ ಶಿವಲಿಂಗ ಶಿವಾಚಾರ್ಯರು ಉಪದೇಶ ನೀಡಿದರು. ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವಸಿದ್ಧಲಿಂಗ ಶಿವಾಚಾರ್ಯರು, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಆಲ್ದೂರಿನ ವನಮಾಲ ಮೃತ್ಯುಂಜಯ, ಬಿ.ಎ.ಶಿವಶಂಕರ ಮಾತನಾಡಿದರು. ಇಳೇಖಾನ್ ಉಮೇಶ್, ಇ.ಸಿ.ಕುಮಾರ್, ಯು.ಎಂ.ಬಸವರಾಜು, ಎಂ.ಡಿ. ಪುಟ್ಟಸ್ವಾಮಿ, ಗಿರಿಜೇಶ್, ಯೋಗೀಶ್, ಮಂಜಪ್ಪ, ಎ.ಎಸ್.ರುದ್ರಪ್ಪ, ಪತ್ರಕರ್ತರಾದ ಪ್ರಭುಲಿಂಗಶಾಸ್ತ್ರಿ, ರಾಜಶೇಖರ್, ರಾಜೇಶ್ ಸೇರಿದಂತೆ ಹಲವರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು.

ಶ್ರೀ ದೇವಿ ಗುರುಕುಲದ ಡಾ. ದಯಾನಂದಮೂರ್ತಿ ಶಾಸ್ತ್ರಿ ತಂಡದಿಂದ ಭಕ್ತಿಗೀತೆಗಳ ಗಾಯನ, ಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಲೋಕೇಶ್ ಕಲಾತಂಡಂದ ವೀರಗಾಸೆ, ಬಾಣ ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ದಿನೇಶ್, ಶಿಕ್ಷಕಿ ದೇವಿಕಾ , ಅಶೋಕಕುಮಾರ್ ಇದ್ದರು.

30 ಕೆಸಿಕೆಎಂ 3

ಚಿಕ್ಕಮಗಳೂರು ತಾಲೂಕು ಆರದವಳ್ಳಿ ಸಮೀಪದ ಶಂಕರದೇವರ ಮಠದಲ್ಲಿ ಬುಧವಾರ ಸಂಜೆ ಶ್ರೀಗುರು ಶಂಕರಸ್ವಾಮಿ ಕಾರ್ತಿಕ ದೀಪೋತ್ಸವ ಸಮಾರಂಭ ನಡೆಯಿತು.