ಲೋಕಾ ಪೊಲೀಸರ ವಿಚಾರಣೆಗೆ ಎಸ್. ಪಾಲಯ್ಯ ಹಾಜರು

| Published : Oct 25 2024, 01:00 AM IST

ಸಾರಾಂಶ

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ನಿವೇಶನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮೈಸೂರಿನ ಆಗಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಪಾಲಯ್ಯ ಅವರನ್ನು ಗುರುವಾರ ವಿಚಾರಣೆ ನಡೆಸಿದರು.

ಮೈಸೂರಿನಲ್ಲಿ 2004 ರಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಪಾಲಯ್ಯ ಅವರು, ಮುಡಾ ಆಯುಕ್ತರಾಗಿ ಸಹ ಸೇವೆ ಸಲ್ಲಿಸಿದದರು. ಕೆಸರೆ ಮೂಲ ಜಮೀನು ಪರಭಾರೆ ಮಾಡಿದ್ದ ಪಾಲಯ್ಯ ಅವರು, ಭೂಮಿ ಪರಭಾರೆಯ ದಾಖಲಾತಿಗಳಿಗೆ ಸಹಿ ಮಾಡಿದ್ದರು. ಸಿಎಂ ಬಾಮೈದನ ಹೆಸರಿಗೆ ಮೂಲ ಜಮೀನು ಪರಭಾರೆ ಮಾಡಿದ್ದರು. ದೇವರಾಜು ಹೆಸರಿಂದ ಮಲ್ಲಿಕಾರ್ಜುನಸ್ವಾಮಿ ಹೆಸರಿಗೆ ಜಮೀನು ಖಾತೆ ಕೂರಿಸುವ ಸಮಯದಲ್ಲಿ ದಾಖಲೆಗಳಿಗೆ ಸಹಿ ಮಾಡಿದ್ದರು,

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪಾಲಯ್ಯ ಅವರಿಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಗುರುವಾರ ಮೈಸೂರು ಲೋಕಾಯುಕ್ತ ಕಚೇರಿಗೆ ಹಾಜರಾದ ಪಾಲಯ್ಯ ಅವರು, ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವವು ಅಧಿಕಾರಿಗಳ ತಂಡವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಪಾಲಯ್ಯ ಹೇಳಿಕೆ

ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಹೊರ ಬಂದ ಪಾಲಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತ ನೋಟಿಸ್ ನೀಡಿತ್ತು. ವಿಚಾರಣೆ ಬರಲು ನೋಟಿಸ್ ನೀಡಿತ್ತು. ಹೀಗಾಗಿ ಬಂದು ವಿಚಾರಣೆ ಎದುಸಿದ್ದೇನೆ. ಅವರು ಕೇಳಿದ ಕಡತಗಳ ಬಗ್ಗೆ ಉತ್ತರ ಕೊಟ್ಟಿದ್ದೇನೆ. ನಾನು ಜಮೀನು ಕುರಿತು ಮಾಡಿದ್ದ ಸಹಿಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಮೊದಲ ನೋಟಿಸ್ ಕೊಟ್ಟಾಗ ಬರಲು ಆಗಿರಲಿಲ್ಲ. ಬೇರೆ ವರ್ಕ್ ಶಾಪ್ ಇದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಇಂದು ಬಂದು ವಿಚಾರಣೆಗೆ ಸಹಕಾರ ನೀಡಿದ್ದೇನೆ ಎಂದು ತಿಳಿಸಿದರು.