ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕ್ಯಾಪ್ಟನ್ ಎಂಬ ಹೆಸರಿನ ಕಾಡಾನೆಯೊಂದು ನಾಯಿಗಳ ಕೂಗಾಟದಿಂದ ರೊಚ್ಚಿಗೆದ್ದು ಮನೆಯ ಮುಂಭಾಗ ನಿಲ್ಲಿಸಿದ್ದ ಕಾರನ್ನು ಜಖಂ ಮಾಡಿದ ಘಟನೆ ನಡೆದಿದೆ.ಅರೇಹಳ್ಳಿ ಭಾಗದ ಸುತ್ತಮುತ್ತಲಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಬುಧವಾರ ಸಂಜೆ ಲಿಂಗಾಪುರ ಗ್ರಾಮದ ಮಲ್ಲೇಶ್ ಗೌಡರ ಜಮೀನಿನಿಂದ ಮುಖ್ಯ ರಸ್ತೆಯ ಮೂಲಕ ಅರೇಹಳ್ಳಿ ಭಾಗಕ್ಕೆ ಸಂಚರಿಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿದ್ದ ಹಲವು ನಾಯಿಗಳು ಆರ್ಭಟಿಸಲು ಪ್ರಾರಂಭಿಸಿವೆ. ಅಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಕಂಡು ಗಲಿಬಿಲಿಗೊಂಡ ಕಾಡಾನೆ ದಿಕ್ಕು ತೋಚದೆ ಪಟ್ಟಣದೊಳಗೆ ಪ್ರವೇಶಿಸಿ ಮನೆಯ ಮುಂಭಾಗ ನಿಲ್ಲಿಸಿದ್ದ ಮೀನಾ ಎಂಬುವವರಿಗೆ ಸೇರಿದ ಆಲ್ಟೊ ಕಾರನ್ನು ಎತ್ತಿ ಬಿಸಾಡಿದಲ್ಲದೆ ತನ್ನ ಕೋರೆಯಿಂದ ಚುಚ್ಚಿ ಬಹುತೇಕ ಧ್ವಂಸಗೊಳಿಸಿದೆ. ವರ್ಷದ ಹಿಂದೆ ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಹುಲ್ಲೇಮಕ್ಕಿ ಗ್ರಾಮದ ಮನೆಯಂಗಳದಲ್ಲಿ ಕರಡಿ ಎಂಬ ಹೆಸರಿನ ಕಾಡಾನೆಯೊಂದಿಗೆ ಕಾದಾಡಿ ಹೆಸರುವಾಸಿಯಾಗಿದ್ದ ಕ್ಯಾಪ್ಟನ್ ಇದೀಗ ಪಟ್ಟಣಕ್ಕೆ ಲಗ್ಗೆ ಇಡುವ ಮೂಲಕ ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕ ಮೂಡಿಸಿದ್ದಾನೆ. ಕೆಲವರು ಪಟ್ಟಣದ ಬೀದಿಯಲ್ಲಿ ಕಾಡಾನೆ ತಿರುಗಾಡುತ್ತಿರುವಾಗ ಮನೆಯೊಳಗೆ ಅವಿತು ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಯತೀಶ್ ಸೇರಿದಂತೆ ಅಧಿಕಾರಿಗಳ ತಂಡ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾಡಾನೆಗಳ ಚಲನವಲನ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.