ಸಾರಾಂಶ
ಶನಿವಾರ ಮೂಡುಬಿದಿರೆ ಆಳ್ವಾಸ್ ಪದವಿ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘದ ಸಭೆ ನೆರವೇರಿತು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಆಳ್ವಾಸ್ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘ ಅಧ್ಯಕ್ಷ ಡಾ. ದಾಮೋದರ ಗೌಡ ಕೆ.ಎಸ್. ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪೋಷಕರು ಮತ್ತು ಶಿಕ್ಷಕರು ಎರಡು ಕಣ್ಣುಗಳಿದ್ದಂತೆ. ನಮ್ಮ ಕಣ್ಣುಗಳೂ ಒಂದೇ ರೀತಿಯ ದೃಷ್ಟಿ ನೀಡಿದರೂ, ಅವುಗಳನ್ನು ಸಮನ್ವಯದಿಂದ ಬಳಸದಿದ್ದರೆ, ಆಳ ಮತ್ತು ಅಂತರವನ್ನು ಸರಿಯಾಗಿ ಅಳೆಯಲು ಸಾಧ್ಯವಾಗುವುದಿಲ್ಲ. ಅಂತೆಯೇ ಪೋಷಕರ ಹಾಗೂ ಶಿಕ್ಷಕರ ನಡುವಿನ ಸಂಬಂಧ ಎಂದು ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಆಳ್ವಾಸ್ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘ ಅಧ್ಯಕ್ಷ ಡಾ. ದಾಮೋದರ ಗೌಡ ಕೆ.ಎಸ್. ಹೇಳಿದರು.ಅವರು ಶನಿವಾರ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಪದವಿ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘದ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ಮೂಲಭೂತ ವಿಜ್ಞಾನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಲಭ್ಯವಿರುವ ಅವಕಾಶಗಳ ಕುರಿತ ವಿವರಿಸಿದರು. ಬಹುತೇಕ ನೋಬೆಲ್ ಪ್ರಶಸ್ತಿ ವಿಜೇತರ ಹಿನ್ನೆಲೆ ಮೂಲಭೂತ ವಿಜ್ಞಾನವಾಗಿತ್ತು ಎಂದು ಉದಾಹರಣೆಯೊಂದಿಗೆ ತಿಳಿಸಿದರು. ಮುಂಬರುವ ದಿನಗಳಲ್ಲಿ ಬಹಳಷ್ಟು ಅವಕಾಶಗಳು ಈ ವಿದ್ಯಾರ್ಥಿಗಳ ಮುಂದಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್, ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಮನ್ವಯದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ಪೂರಕ ಬೆಳವಣಿಗೆಗೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ತಿಳಿಸಿದರು.ಈ ಸಂದರ್ಭ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ತೃತೀಯ ಬಿಎಸ್ಸಿ ವಿದ್ಯಾರ್ಥಿಗಳಾದ ಮೇಘಾ ಬಿ.ವಿ., ಮೊಹಮ್ಮದ್ ಫಾಹಿಮ್, ಜೋನಾಥನ್ ಡಿಸೋಜ, ಉಜ್ವಲ್, ತೃಪ್ತಿ ಶೆಟ್ಟಿ ಮತ್ತು ದಿಯಾ ದಿನೇಶ್ ಅವರನ್ನು ಗೌರವಿಸಲಾಯಿತು. ತೃತೀಯ ಬಿ.ಎಸ್ಸಿಯ ಕಿರಣ್ ಮತ್ತು ಎಂ.ಎಸ್. ಸುನೈನಾ ಅಭಿಪ್ರಾಯ ಹಂಚಿಕೊಂಡರು.ಆಳ್ವಾಸ್ ಕಾಲೇಜಿನಲ್ಲಿ ಮತ್ತು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಪೋಷಕರು ಹರ್ಷ ವ್ಯಕ್ತ ಪಡಿಸಿದರು. ವಿಜ್ಞಾನ ವಿಭಾಗಗಳು ನಡೆಸಿದ ವಿವಿಧ ಚಟುವಟಿಕೆಗಳನ್ನು ಪೋಷಕರಿಗೆ ವಿವರಿಸಲಾಯಿತು.ಕಾರ‍್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪಿಟಿಎ ಸಂಘದ ಸದಸ್ಯರಾದ ಗೀತಾ ಶೆಟ್ಟಿ, ಅರುಣಾ ಉಡುಪ ಮತ್ತು ಪಿಟಿಎ ಸಂಘದ ಶಿಕ್ಷಕ ಸಂಯೋಜಕಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಹಾಗೂ ನಿಶಾ ಕೆ.ಎಂ. ಇದ್ದರು.ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಎಂ. ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ನಿಶಾ ಕೆ.ಎಂ. ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಗಗನಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.