ಸಾರಾಂಶ
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹ ವಾಚನ, ನವಗ್ರಹ ವಾಸ್ತು ಹವನ, ಶಿಖರ ಕಲಶ ಶುದ್ಧಿ ನಡೆಯಿತು.
ಭಟ್ಕಳ: ಶಕ್ತಿಕ್ಷೇತ್ರ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಪ್ರಯುಕ್ರ ಭಾನುವಾರ ಬೆಳಗ್ಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಶಿಖರ ಕಲಶ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ನಂತರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ನೂತನ ಯಜ್ಞಮಂಟಪ ಉದ್ಘಾಟನೆಯನ್ನೂ ನೆರವೇರಿಸಿದ ಶ್ರೀಗಳು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಹಾಗೂ ಧರ್ಮದರ್ಶಿಗಳಿಗೆ ಆಶೀರ್ವಾದ ಪೂರ್ವಕ ಮಂತ್ರಾಕ್ಷತೆಯನ್ನು ನೀಡಿ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿದೆ ಎನ್ನುವ ಕುರಿತು ಆಶೀರ್ವಾದ ನೀಡಿದರು.ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ, ಕಮಿಟಿಯ ಸದ್ಯರು, ಊರಿನ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹ ವಾಚನ, ನವಗ್ರಹ ವಾಸ್ತು ಹವನ, ಶಿಖರ ಕಲಶ ಶುದ್ಧಿ ನಡೆಯಿತು.ನಂತರ ಮಧ್ಯಾಹ್ನ ಮಹಾಮಂಗಳಾರತಿ, ಯತಿ ಬ್ರಾಹ್ಮಣ ಸಮಾರಾಧನೆ, ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತಿ ರಸಮಂಜರಿ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಕೋಣಂದೂರಿನ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಕನ್ನಡ ಗಝಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಅವರ ಗಾಯನ ಜನ ಮೆಚ್ಚುಗೆ ಪಡೆಯಿತು. ಜು. ೧ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಮಂಟಪ ದೇವತಾ ಆವಾಹನ, ಜಪಾರಂಭ, ಅಗ್ನಿ ಪ್ರತಿಷ್ಠಾಪನೆ, ಅಂಶತಃ ಸೂಕ್ತಹವನ, ಬೆಳಗ್ಗೆ ೯ ಗಂಟೆಯಿಂದ ಲಕ್ಷ ಕುಂಕುಮಾರ್ಚನೆ, ೧೨.೩೦ಕ್ಕೆ ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ಯತಿ ಬ್ರಾಹ್ಮಣ ಸಮಾರಾಧನೆ, ಮಹಾ ಅನ್ನಸಂತರ್ಪಣೆ, ಸಂಜೆ ೪ರಿಂದ ಮಹಿಳೆಯರಿಂದ ಲಿಲಿತಾ ಸಹಸ್ರನಾಮ, ಭಜನಾ ಕಾರ್ಯಕ್ರಮ, ರಾತ್ರಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಸಂಗಮ ಕಲಾವಿದರಿಂದ ವಿಭಿನ್ನ ಶೈಲಿಯ ಕನ್ನಡ ನಾಟಕ ಶಿವಧೂತ ಗುಳಿಗ ನಡೆಯಲಿದೆ.