ಅಡಕೆ ತಿಂದರೆ ಕ್ಯಾನ್ಸರ್ ಬರುತ್ತಿದೆ ಎಂದು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ತಮ್ಮ ಲಾಬಿಗೋಸ್ಕರ ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಅನೇಕ ಸಂಘ-ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲು ಏರಿದಾಗ ಹೈಕೋರ್ಟ್ ಇವುಗಳನ್ನು ಒಪ್ಪದೆ ಆಯಾ ಸರ್ಕಾರಗಳ ಮುಖಾಂತರ ವರದಿ ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿತ್ತು.

ಕನ್ನಡಪ್ರಭ ವಾರ್ತೆ ಶಿರಸಿ

ಈ ಭಾಗದ ಸಂಸದನಾಗಿ ರೈತರ ಹಿತ ಕಾಪಾಡಲು ಸದಾ ಬದ್ಧ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶ್ರೀ ಕ್ಷೇತ್ರ ಕೊಳಗೀಬೀಸ್ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ನಡೆದ ಅಡಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಡಕೆ ತಿಂದರೆ ಕ್ಯಾನ್ಸರ್ ಬರುತ್ತಿದೆ ಎಂದು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ತಮ್ಮ ಲಾಬಿಗೋಸ್ಕರ ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಅನೇಕ ಸಂಘ-ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲು ಏರಿದಾಗ ಹೈಕೋರ್ಟ್ ಇವುಗಳನ್ನು ಒಪ್ಪದೆ ಆಯಾ ಸರ್ಕಾರಗಳ ಮುಖಾಂತರ ವರದಿ ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿತ್ತು.

ಈ ಹಿನ್ನೆಲೆ ಕೇಂದ್ರ ಸರ್ಕಾರ ಸುಮಾರು ₹10 ಕೋಟಿ ಖರ್ಚು ಮಾಡಿ ತಜ್ಞರ ಸಮಿತಿ ನೇಮಿಸಿ ಅಡಕೆ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ವರದಿ ಒಪ್ಪಿಸುವಂತೆ ಹೇಳಲಾಗಿತ್ತು. ಅದರಂತೆ ಈಗ ವರದಿ ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.

ಈ ತಜ್ಞರ ವರದಿ ಕೇಂದ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆದ ನಂತರ ವರದಿಯ ಆಧಾರದ ಮೇಲೆ ಸಮರ್ಥವಾಗಿ ನ್ಯಾಯಾಲಯದಲ್ಲಿ ವರದಿ ಕುರಿತು ವಾದ ಮಂಡಿಸಿ ತೀರ್ಪು ಹೊರ ಬರುವ ತನಕ ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಕಾಗೇರಿ ಹೇಳಿದರು.

ದಕ್ಷಿಣ ಕನ್ನಡ, ಉತ್ತರ ಕನ್ನಡ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಡಕೆ ಮರಕ್ಕೆ ಎಲೆಚುಕ್ಕಿ ರೋಗ ಕಂಡುಬಂದಿದ್ದು, ಕೇಂದ್ರ ಸರ್ಕಾರ ಇದರ ಸಮಗ್ರ ಅಧ್ಯಯನ ನಡೆಸಲು ವಿಜ್ಞಾನಿಗಳ ಸಮಿತಿ ನೇಮಕ ಮಾಡಿದೆ. ರೋಗ ಹರಡದಂತೆ ಏನು ಕ್ರಮ ಜರುಗಿಸಬೇಕೆಂದು ಈ ತಜ್ಞರು ರೈತರಿಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಎಲ್ಲ ರೈತರು ತಜ್ಞರ ಸಹಾಯ ಪಡೆದು ತಮ್ಮ ತೋಟ ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.

ಸಿ.ಪಿ.ಸಿ.ಆರ್.ಐ. ಮುಖ್ಯಸ್ಥ ಡಾ. ಬಾಲಚಂದ್ರ ಹೆಬ್ಬಾರ್ ಮಾತನಾಡಿ, ಎಲೆಚುಕ್ಕಿ ರೋಗ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಅದಕ್ಕಾಗಿ ಆದಷ್ಟು ರಾಸಾಯನಿಕ ಗೊಬ್ಬರವನ್ನು ಬಳಸದೆ ಕೊಟ್ಟಿಗೆ ಗೊಬ್ಬರ ಬಳಸಬೇಕು ಎಂದು ಅಭಿಪ್ರಾಯಪಟ್ಟರು.

ವಿಜ್ಞಾನಿ ವಿನಾಯಕ ಹೆಗಡೆ ಮಾತನಾಡಿ, 2016ರಲ್ಲಿ ಎಲೆಚುಕ್ಕಿ ರೋಗ ತ್ರಿಪುರಾ ರಾಜ್ಯದಲ್ಲಿ ಕಂಡು ಬಂದಿತು. ಈ ಒಂದು ಫಂಗಸ್‌ನಿಂದ ಕರ್ನಾಟಕದ ಮೂಡಿಗೆರೆ ತಾಲೂಕಿನ ಕಳಸದ ಮರಸಣಿಗೆ ಪ್ರದೇಶದಲ್ಲಿ ಕೆಲವೇ ತೋಟಗಳಿಗೆ ರೋಗಲಕ್ಷಣಗಳು ಕಂಡು ಬಂದಿದ್ದವು. ರೈತರು ನಿರ್ಲಕ್ಷ ಮಾಡದೆ ತಮ್ಮ ತೋಟಗಳಿಗೆ ವಿಜ್ಞಾನಿಗಳು ಸೂಚಿಸಿದ ಔಷಧ ಸಿಂಪಡಿಸುವುದು ಮತ್ತು ಮಣ್ಣಿನ ಪರೀಕ್ಷೆ ಮಾಡಿಸುವುದು ಹಾಗೂ ಎಲೆಚುಕ್ಕಿ ರೋಗ ಕಂಡು ಬಂದಾಗ ಪ್ರತಿಯೊಬ್ಬ ರೈತರು ಅದು ಬೇರೆ ಕಡೆ ಹರಡುದಂತೆ ವಿಜ್ಞಾನಿಗಳ ಸಲಹೆಯಂತೆ ತೋಟವನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಟಿಎಸ್ಎಸ್ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ್, ಕೆವಿಕೆಯ ರೂಪಾ ಪಾಟೀಲ್, ರೈತರು ಸೇರಿದಂತೆ ಅನೇಕರು ಇದ್ದರು.