ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಆಮಲಿಂಗೇಶ್ವರ ದೇವಾಲಯ

| Published : Aug 07 2024, 01:05 AM IST

ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಆಮಲಿಂಗೇಶ್ವರ ದೇವಾಲಯ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ಕಣಿವೆಯ ದಟ್ಟ ಕಾನನದ ಹಚ್ಚ ಹಸಿರಿನ ನಡುವೆ ನಿಸರ್ಗ ದೇವಿಯ ಮಡಿಲಲ್ಲಿ ಜಲಪಾತದಂತೆ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಸೊಬಗನ್ನು ನೋಡಲು ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಆಮಲಿಂಗೆಶ್ವರ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಅನಿಲ್‌ ಬಿರಾದರ್‌

ಕನ್ನಡಪ್ರಭ ವಾರ್ತೆ ಕೊಡೇಕಲ್

ಕೃಷ್ಣಾ ಕಣಿವೆಯ ದಟ್ಟ ಕಾನನದ ಹಚ್ಚ ಹಸಿರಿನ ನಡುವೆ ನಿಸರ್ಗ ದೇವಿಯ ಮಡಿಲಲ್ಲಿ ಜಲಪಾತದಂತೆ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಸೊಬಗನ್ನು ನೋಡಲು ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಆಮಲಿಂಗೆಶ್ವರ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಕೊಡೇಕಲ್ ಸಮೀಪದ ಅಮ್ಮಾಪುರ ಎಸ್.ಕೆ. ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ಆಮಲಿಂಗೇಶ್ವರ ದೇವಸ್ಥಾನದ ಬಳಿ ನದಿಗೆ ತಡೆಗೋಡೆಯಿದ್ದು, ಇದು ಮಾನವ ನಿರ್ಮಿತವಾಗಿದೆ. ಲಿಂಗಸೂರು ತಾಲೂಕಿನ ಏಳಗುಂದಿ ವಿದ್ಯುತ್ ಸ್ಥಾವರಕ್ಕೆ ನೀರು ಪೂರೈಸಲು ಅಮ್ಮಾಪುರ ಎಸ್.ಕೆ. ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ.

ಸದ್ಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿರುವುದರಿಂದ ತಡೆಗೋಡೆಯನ್ನು ದಾಟಿ ರಭಸವಾಗಿ ಕೃಷ್ಣೆಯ ಜಲಧಾರೆ ಧುಮ್ಮಿಕ್ಕುತ್ತಿದೆ. ಇದರಿಂದ ಜಲಪಾತದಂತೆ ಭಾಸವಾಗುವ ಕೃಷ್ಣೆಯ ಜಲವೈಸಿರಿಯನ್ನು ನೋಡಲು ಎರಡು ಕಣ್ಣು ಸಾಲದು ಎನ್ನುತ್ತಾರೆ ಪ್ರವಾಸಿಗರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ:

ಪುರಾಣ ಪ್ರಸಿದ್ಧವಾದ ಆಮಲಿಂಗೇಶ್ವರ ದೇವಸ್ಥಾನದ ಸುತ್ತಲೂ ಗುಡ್ಡಗಾಡುಗಳಿದ್ದು, ಜತೆಗೆ ಎರಡು ಬೆಟ್ಟಗಳನ್ನು ಸೀಳಿದಂತೆ ಹರಿಯುವ ಕೃಷ್ಣಾ ನದಿಯು ನಿಸರ್ಗ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಯ ಮೇಲಿನಿಂದ ಧುಮ್ಮಿಕ್ಕುವ ಜಲಧಾರೆಯನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಆದರೆ, ದೇವಸ್ಥಾನಕ್ಕೆ ತೆರಳಲು ಸುರಕ್ಷಿತವಾದ ರಸ್ತೆಯಿರದ ಕಾರಣ ಜನತೆ ಹೈರಾಣಾಗುತ್ತಿದ್ದಾರೆ. ವರ್ಷಗಳ ಹಿಂದೆ ಮಾಜಿ ಸಚಿವ ರಾಜೂಗೌಡ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಾಡಿಸಿದ್ದಾದರೂ ಚುನಾವಣಾ ನಂತರ ಡಾಂಬರೀಕರಣಗೊಳ್ಳದೇ ಅರ್ಧಕ್ಕೆ ಕಾಮಗಾರಿ ನಿಂತಿದೆ. ಅಲ್ಲದೇ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಇಂತಹ ಸಣ್ಣಪುಟ್ಟ ಅಭಿವೃದ್ಧಿ ಮಾಡಿ ಅಢೀ ನದಿಯ ತಟದಲ್ಲಿ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಿದರೆ ಆಮಲಿಂಗೇಶ್ವರ ದೇವಸ್ಥಾನವು ಜಿಲ್ಲೆಯ ಮತ್ತೊಂದು ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.