ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬಂತೆ ರೂಪಿತವಾದ ಸಂವಿಧಾನ ನಮ್ಮ ಬದುಕಿನ ಜೀವಾಳವಾಗಿದೆ. ಈ ಸಂವಿಧಾನವನ್ನು ದೇಶಕ್ಕೆ ನೀಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಸ್ಮರಿಸುವುದು ನಮ್ಮ ಆಧ್ಯ ಕರ್ತವ್ಯ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಮತ್ತು ಡೀನ್ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಲ್ಯದಿಂದಲೇ ಜಾತಿಯ ಕಾರಣಕ್ಕಾಗಿ ಅವಮಾನ ಸಂಕಟಗಳನ್ನು ಅನುಭವಿಸಿದರೂ ಓದನ್ನು ಯಜ್ಞದಂತೆ ಸ್ವೀಕರಿಸಿ, ವಿದ್ಯಾ ಸರಸ್ವತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಕಾರಣ ಜ್ಞಾನ ಸೂರ್ಯರಾಗಿ ಬೆಳಗಿದ್ದಾರೆ. ತಾವು ಬರೋಡ ಮಹಾರಾಜರ ನೆರವಿನಲ್ಲಿ ಉನ್ನತ ಶಿಕ್ಷಣವನ್ನು ದೇಶ ವಿದೇಶಗಳಲ್ಲಿ ಪಡೆಯುವಂತಾದ ಪರಿಣಾಮವಾಗಿ ವಿಶ್ವವೇ ಮೆಚ್ಚುವ ಪರಿಪೂರ್ಣ ಸಂವಿಧಾನವನ್ನು ದೇಶಕ್ಕೆ ನೀಡಿದ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ ಎಂದರು.ಅಂಬೇಡ್ಕರ್ ದಲಿತ ಕುಟುಂಬದಲ್ಲಿ ಹುಟ್ಟಿರಬಹುದು. ಭಾರತೀಯರು ಇಂದು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರು ಬರೆದಿರುವ ಗಟ್ಟಿಯಾದ ಸಂವಿಧಾನವಾಗಿದೆ. ವಿಶ್ವದ ಭೂಪಟದಲ್ಲಿ ಎಲ್ಲಿಯವರೆಗೆ ಭಾರತ ರಾರಾಜಿಸುತ್ತದೆಯೋ ಅಲ್ಲಿಯವರೆಗೆ ಅಂಬೇಡ್ಕರ್ ಬರೆದ ಸಂವಿಧಾನ ಇರಲಿದೆ. ಅಂಬೇಡ್ಕರ್ ಜೀವಂತವಾಗಿ ಇರಲಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಡಾ.ಎಂ.ಆರ್.ಅನಿತಾ, ಡಾ.ರಮೇಶ್, ಡಾ.ವೆಂಕಟೇಶಬಾಬು, ಡಾ. ನಾಗಲಕ್ಷ್ಮೀ, ನರ್ಸಿಂಗ್ ಪ್ರಾಂಶುಪಾಲರಾದ ಶಾಂತಿ, ಪ್ರಾಧ್ಯಾಪಕರಾದ ಡಾ.ಪುಷ್ಪ, ಡಾ.ನರಸಿಂಹ, ಡಾ.ಚೈತ್ರ, ಡಾ.ಜ್ಯೋತಿ. ಡಾ.ಹೇಮಂತ್ ಕುಮಾರ್, ಡಾ.ಅನಿತಾಲಕ್ಷ್ಮೀ, ಡಾ.ಶ್ರೀನಿವಾಸ್ ಇದ್ದರು.
ಸಿಕೆಬಿ-2 ಕಾರ್ಯಕ್ರಮದಲ್ಲಿ ಡೀನ್ ಡಾ.ಎಂ.ಎಲ್. ಮಂಜುನಾಥ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.