ಸಾರಾಂಶ
ವಿಶ್ವವೇ ಗೌರವಿಸುವಂತಹ ಸಂವಿಧಾನ ರಚನೆ ಮಾಡುವಲ್ಲಿ ಪ್ರಮುಖರಾದ ಡಾ. ಬಿ.ಆರ್. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಾಗದೆ ರಾಷ್ಟ್ರದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಇಂತಹ ಮಹಾನ್ ಚೇತನದ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಅವರ ಸಂದೇಶಗಳನ್ನು ಪಾಲನೆ ಮಾಡಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ: ಶೋಷಿತ ಸಮುದಾಯ ಸೇರಿ ರಾಷ್ಟ್ರದ ಎಲ್ಲ ವರ್ಗದ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಮುಖ್ಯ ಕಾರಣ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪಮಾಲೆ ಹಾಕಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.ವಿಶ್ವವೇ ಗೌರವಿಸುವಂತಹ ಸಂವಿಧಾನ ರಚನೆ ಮಾಡುವಲ್ಲಿ ಪ್ರಮುಖರಾದ ಡಾ. ಬಿ.ಆರ್. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಾಗದೆ ರಾಷ್ಟ್ರದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಇಂತಹ ಮಹಾನ್ ಚೇತನದ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಅವರ ಸಂದೇಶಗಳನ್ನು ಪಾಲನೆ ಮಾಡಬೇಕು ಎಂದರು.
ಅಂಬೇಡ್ಕರ್ ಮತ್ತು ಮಹಾತ್ಮಗಾಂಧೀಜಿ ಒಂದೇ ಕಾಲಘಟ್ಟದಲ್ಲಿ ಹೋರಾಟಗಳನ್ನು ಮಾಡುತ್ತಿದ್ದರು. ಭಾರತದ ಪ್ರಜೆಗಳೆಲ್ಲರೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತಮ್ಮ ಸಂಪ್ರದಾಯ, ಸಂಸ್ಕೃತಿಯಾಗಿ ರೂಢಿಸಿಕೊಂಡು ಅಭಿಮಾನದಿಂದ ಅನುಸರಿಸುವಂತಾಗಬೇಕೆಂದು ಕನಸು ಕಂಡಿದ್ದರು. ಹಾಗಾಗಿ ವಿಶ್ವಮಾನವತೆಯ ಗುಣ ಹೊಂದಿದ್ದ ಅಂಬೇಡ್ಕರ್ ಅವರಿಗೆ ಇಡೀ ವಿಶ್ವವೇ ಗೌರವ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು. ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಕೆಪಿಸಿಸಿ ಎಸ್ಸಿಎಸ್ಟಿ ಘಟಕದ ರಾಜ್ಯ ಸಂಚಾಲಕ ತಿಬ್ಬನಹಳ್ಳಿ ರಮೇಶ್, ವಕೀಲ ಚಂದ್ರಶೇಖರ್, ಮುಖಂಡರಾದ ಎಚ್.ಡಿ.ಪ್ರಸನ್ನ, ಶಿವಮೂರ್ತಿ, ಮಹೇಶ್, ವರದರಾಜು, ಹನುಮಂತಯ್ಯ ಸೇರಿ ನೂರಾರು ಮಂದಿ ಇದ್ದರು.