ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಬದುಕನ್ನು ಕಟ್ಟಿಕೊಳ್ಳಲು ಅವರು ರಚಿಸಿದ ಸಂವಿಧಾನ ನಮ್ಮೆಲ್ಲರಿಗೆ ಒಂದು ಶಕ್ತಿಯಾಗಿದೆ

ಕೊಪ್ಪಳ: ಸರ್ವರಿಗೂ ಸಮಾನ ಅವಕಾಶ ಸಿಗುವ ವ್ಯವಸ್ಥೆ ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ವರಿಗೂ ಶಕ್ತಿ ನೀಡಿದ್ದಾರೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಸಮಾನತೆಯಿಂದ ಕೂಡಿದ್ದ ನಮ್ಮ ದೇಶದಲ್ಲಿ ಸಮಾನತೆ ತರಲು ಹಾಗೂ ಮೇಲು-ಕೀಳು, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಹೋಗಲಾಡಿಸಲು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ದೇಶದಲ್ಲಿ ಸಮ ಸಮಾಜ ನಿರ್ಮಿಸಲು ಡಾ.ಬಿ.ಆರ್.ಅಂಬೇಡ್ಕರ್ ಹಲವಾರು ಹೋರಾಟ,ಚಳವಳಿ ಮೂಲಕ ಶ್ರಮಿಸಿದ್ದಾರೆ. ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಬದುಕನ್ನು ಕಟ್ಟಿಕೊಳ್ಳಲು ಅವರು ರಚಿಸಿದ ಸಂವಿಧಾನ ನಮ್ಮೆಲ್ಲರಿಗೆ ಒಂದು ಶಕ್ತಿಯಾಗಿದೆ. ಅಂಬೇಡ್ಕರ್ ಎಂದರೇ ಒಂದು ಚಳವಳಿ, ಸಮಾನತೆ, ಸಮಾನತೆಯ ಬದುಕು ಕಟ್ಟಿಕೊಟ್ಟವರು. ಅವರು ಎಲ್ಲ ವರ್ಗದವರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ನೀಡಿದ್ದಾರೆ. ಇದನ್ನು ನಾವು ಸಂವಿಧಾನದ ಪೀಠಿಕೆ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಂತಹ ಸಂವಿಧಾನದ ಪೀಠಿಕೆ ಪ್ರಸ್ತಾವನೆಯ ಸ್ಮಾರಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ಅನಾವರಣ ಮಾಡಲಾಗಿದ್ದು, ಸಂತೋಷದ ವಿಚಾರವಾಗಿದೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ತೀವ್ರ ಶೋಷಣೆಯ ಕಾಲದಲ್ಲಿ ಉನ್ನತ ಶಿಕ್ಷಣ ಪಡೆದವರು. ಅಂಬೇಡ್ಕರ್ ನಮಗೆ ಹೋರಾಟ ಮಾಡುವಂತಹ ಮಾರ್ಗ ನೀಡಿದ್ದಾರೆ. ನಾವು ಅವುಗಳನ್ನು ಪಾಲಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ‍್ಯದ ಆಶಯಗಳ ಮೇಲೆ ದೇಶ ಕಟ್ಟಿದರು. ಅದೇ ರೀತಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಶ್ರಮ ದೇಶದ ಆಹಾರ ಭದ್ರತೆಗೆ ಭದ್ರ ಬುನಾದಿ ಹಾಕಿದೆ. ಈ ಇಬ್ಬರೂ ಮಹಾನ್ ಚೇತನಗಳ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಸುಗ್ಗೇನಹಳ್ಳಿ ರಮೇಶ್ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಂವಿಧಾನ ಪೀಠಿಕೆಯ ವಾಚನ: ಕಾರ್ಯಕ್ರಮ ಅಂಗವಾಗಿ ಸಂವಿಧಾನ ಪೀಠಿಕೆಯ ವಾಚನ ಮಾಡಲಾಯಿತು. ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ ಸಂವಿಧಾನ ಪೀಠಿಕೆ ಬೋಧಿಸಿದರು.

ಗಮನ ಸೆಳೆದ ಕ್ರಾಂತಿ ಗೀತೆಗಳ ಗಾಯನ:ಕಾರ್ಯಕ್ರಮದಲ್ಲಿ ಮಂಜುನಾಥ ಅಳ್ಳಳ್ಳಿ ಮತ್ತು ಸಂಗಡಿಗರು ಹಾಡಿದ ಡಾ. ಬಿ.ಆರ್.ಅಂಬೇಡ್ಕರ್ ಕುರಿತಾದ ಕ್ರಾಂತಿ ಗೀತೆಗಳು ಎಲ್ಲರ ಗಮನ ಸೆಳೆದವು.

ಸನ್ಮಾನ: ಡಾ.ಬಿ.ಆರ್.ಅಂಬೇಡ್ಕರ ಜನ್ಮ ದಿನಾಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿ ನಿರ್ಮಿಸಲಾದ ಭಾರತ ಸಂವಿಧಾನದ ಪ್ರಸ್ತಾವನೆಯ ಶಿಲಾ ಸ್ಮಾರಕ ನಿರ್ಮಿಸಿದ ಪ್ರಯುಕ್ತ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ಯಲ್ಲಪ್ಪ ಬಳಗಾನೂರ, ಸಿದ್ರಾಮ ಹೊಸಮನಿ, ಚನ್ನಬಸಪ್ಪ ಹೊಳೆಯಪ್ಪನವರ, ಗವಿಸಿದ್ದಪ್ಪ ಗಿಣಿಗೇರಿ, ಸಿದ್ದು ಮ್ಯಾಗೇರಿ ಸೇರಿದಂತೆ ಸಮಾಜದ ಮತ್ತಿತರರು ಉಪಸ್ಥಿತರಿದ್ದರು.

ಮೆರವಣಿಗೆ: ಕಾರ್ಯಕ್ರಮದ ನಿಮಿತ್ತ ಬೆಳಗ್ಗೆ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಕೊಪ್ಪಳ ನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಿಂದ ಆರಂಭಗೊಂಡು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದವು.