ಸಾರಾಂಶ
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬಣ್ಣನೆ । ಡಾ.ಬಾಬಾ ಅಂಬೇಡ್ಕರ್ ೧೩೩ನೇ ಜಯಂತಿ । ನಾನು ಡಿಸಿಯಾಗಲು ಸಂವಿಧಾನ ಕಾರಣ
ಕನ್ನಡಪ್ರಭ ವಾರ್ತೆ ಹಾಸನಡಾ.ಬಿ.ಆರ್.ಅಂಬೇಡ್ಕರ್ ಎಂದರೆ ಸಂವಿಧಾನ ಶಿಲ್ಪಿ ಮಾತ್ರವಲ್ಲ. ಕೋಟ್ಯಂತರ ಜನರ ಸಮಾಜ ಸುಧಾರಕರಾಗಿದ್ದಾರೆ. ಅಲ್ಲದೆ ಅವರು ಲಿಖಿತವಾದ ದೃಶ್ಯ ಕಾವ್ಯ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ನೇ ಜಯಂತಿಯ ಅಂಗವಾಗಿ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿ ಮಾತನಾಡಿದರು.‘ಶಿಕ್ಷಣದಿಂದ ಮಾತ್ರ ನಮ್ಮನ್ನು ನೋಡುವುದ ಶೈಲಿ ಬದಲಾವಣೆ ಮಾಡಬಹುದು. ನವಭಾರತದ ನಿರ್ಮಾಣಕ್ಕೆ ಕಾರಣರಾದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ತುಳಿತಕ್ಕೆ ಒಳಗಾದ ಸಮಾಜವನ್ನು ಮೇಲೆತ್ತುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ, ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೀಡುವಂತೆ ಮಾಡಿರುವ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು’ ಎಂದು ಹೇಳಿದರು.
‘ನಾನು ಇಂದು ಜಿಲ್ಲಾಧಿಕಾರಿ ಆಗಿರುವುದಕ್ಕೆ, ಮಹಿಳೆಯರು ಮತ ಹಾಕುವುದಕ್ಕೆ, ಆಸ್ತಿಯಲ್ಲಿ ಪಾಲು ಪಡೆಯುವುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವೇ ಕಾರಣವಾಗಿದ್ದು, ದಲಿತರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದು ಇದಕ್ಕೂ ಸಂವಿಧಾನವೇ ಕಾರಣ. ಜನರಲ್ಲಿರುವ ಜಾತೀಯತೆಯ ವಿಷ ಬೀಜಗಳನ್ನು ತೊಡೆದು ಹಾಕಬೇಕು, ತಮ್ಮೊಳಗಿನ ಜಾತೀಯತೆಯನ್ನು ಮರೆತು ಎಲ್ಲರೂ ಸಮಾನರು ಎಂಬ ಭಾವನೆ ಬಂದಾಗ ಮಾತ್ರ ಅಂಬೇಡ್ಕರ್ ಜಯಂತಿ ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು.‘ಅಂಬೇಡ್ಕರ್ ಅವರು ಜಗತ್ತಿಗೆ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿ ದೇಶದ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಮುಂದಾದವರು. ಅಂಬೇಡ್ಕರ್ ಆಶಯದಂತೆ ವ್ಯಕ್ತಿ ಸಮಾಜದ ಶಕ್ತಿಯಾದರೆ ಒಂದು ಕುಟುಂಬ ಮುಂದುವರಿಯುವ ಜೊತೆಗೆ ಸಮಾಜವು ಮುಂದುವರೆಯುತ್ತದೆ’ ಎಂದು ಹೇಳಿದರು.
‘ಸಂವಿಧಾನ ನಮ್ಮೆಲ್ಲರಿಗೂ ಹಕ್ಕುಗಳನ್ನು ನೀಡಿದೆ. ಅವುಗಳನ್ನು ನಾವೆಲ್ಲರೂ ಸೇರಿ ಅನುಷ್ಠಾನಗೊಳಿಸಬೇಕು. ಅಂಬೇಡ್ಕರ್ ರವರ ಆದರ್ಶ, ತತ್ವಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅಂಬೇಡ್ಕರ್ ಅವರು ದೇಶದ ಮೊದಲ ಕಾನೂನು ಮಂತ್ರಿ, ಮಹಾ ಮೇಧಾವಿ, ಚಿಂತಕರಾಗಿ ದೇಶದ ಎಲ್ಲಾ ಸಮುದಾಯಗಳ ಏಳಿಗೆಗೆ ಹಾಗೂ ಹೆಣ್ಣು ಮಕ್ಕಳ ಏಳಿಗೆಗೆ ಶ್ರಮಿಸಿದವರು’ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಂ.ಶಿವಣ್ಣ, ಡಿಎಫ್‌ಒ ಸೌರಭ್, ಜಿಲ್ಲಾ ಸರ್ಜನ್ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ. ದಲಿತ ಮುಖಂಡರಾದ ನಾಗರಾಜ್ ಹೆತ್ತೂರ್, ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ಎಚ್‌ಕೆ ಸಂದೇಶ್, ವಿಜಯಕುಮಾರ್, ಜಿ.ಒ. ಮಹಾಂತಪ್ಪ, ಕುಮಾರಸ್ವಾಮಿ, ಎಸ್.ಡಿ.ಚಂದ್ರು ಇದ್ದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ೧೩೩ನೇ ಜಯಂತಿಯ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.