ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶೋಷಿತ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ನಿರ್ಣಾಯಕವಾಗಿತ್ತೆಂದು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್ ಅಭಿಪ್ರಾಯ ಪಟ್ಟರು.

ಅಂಬೇಡ್ಕರ್ ಪರಿ ನಿಬ್ಬಾಣ ದಿನದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನದ ಮೂಲಕ ಸಮಾಜದಲ್ಲಿ ಶೋಷಿತರು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಬಣ್ಣಿಸಿದರು.

ದಲಿತರು, ಶೋಷಿತರು ಹಾಗೂ ದೇಶದ ಸಮಸ್ತ ಸ್ತ್ರೀ ಕುಲದ ವಿಮೋಚಕರಾಗಿ ಸಮಾಜದಲ್ಲಿ ಶೋಷಣೆ ಹಾಗೂ ದಬ್ಬಾಳಿಕೆ ಹೋಗಲಾಡಿಸಲು ಪ್ರಯತ್ನಿಸಿದರು. ಸಂವಿಧಾನದಲ್ಲಿ ಸಮಾನತೆ ತತ್ವ ಸಾಕಾರಗೊಳಿಸಿ ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಕರೆ ನೀಡಿದರು. ಮುಂದುವರಿದ ಸಮುದಾಯಗಳ ನಡುವೆ ದಮನಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ಧ್ವನಿಯಾಗಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಬದುಕು ಹಾಗೂ ಹಕ್ಕು ಕೊಟ್ಟ ಮಹಾನ್ ಚೇತನಕ್ಕೆ ನಾವೆಲ್ಲರೂ ಋಣಿಯಾಗಿರಬೇಕು ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯಎಂ.ಎನ್.ಅಹೋಬಳಪತಿ ಮಾತನಾಡಿ, ಪ್ರಸ್ತುತ ಜನಸಾಮಾನ್ಯರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಬಾಲಿಶವಾದ ಚರ್ಚೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ಅಂಬೇಡ್ಕರ್ ಸಮಗ್ರ ದೇಶದ ಪ್ರಗತಿ ಕುರಿತು ಚಿಂತಿಸಿದವರು. ಕಾರ್ಮಿಕರ ಕಾನೂನುಗಳು, ಹೆಣ್ಣುಮಕ್ಕಳಿಗೆ ಆಸ್ತಿಹಕ್ಕು, ಕೈಗಾರಿಕರಣ, ಆರ್ಥಿಕ ನೀತಿಗಳು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಅಂಬೇಡ್ಕರ್ ತಳಸ್ಪರ್ಶಿಯಾಗಿ ಅಧ್ಯಯನ ನಡೆಸುವುದರೊಂದಿಗೆ ಕಾರ್ಯ ನಿರ್ವಹಿಸಿದರು ಎಂದರು.

ಸಮಾಜದ ಏಣಿಶ್ರೇಣಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಸ್ಥರಕ್ಕೆ ಸೇರಿದ ಅಂಬೇಡ್ಕರ್, ಧರ್ಮ ಹಾಗೂ ಸಂಪ್ರಾದಾಯಗಳ ಹೆಸರಿನಲ್ಲಿದ್ದ ಅಸಮಾನತೆಗಳನ್ನು ವಿಮರ್ಶಾತ್ಮಕ ದೃಷ್ಠಿಯಿಂದ ನೋಡಿ, ಅವುಗಳ ವಿರುದ್ಧ ಹೋರಾಟ ನಡೆಸಿದರು. ಅಂಬೇಡ್ಕರ್ ಹೋರಾಟ ಮಾಡುವುದರ ಜೊತೆಗೆ ತಮ್ಮ ವಿಚಾರಗಳಿಗೆ ಬರಹದ ರೂಪ ನೀಡಿದ್ದಾರೆ. ತಮ್ಮ ಜೀವಿತ ಕೊನೆಗಾಲದಲ್ಲಿ ಸಮಾನತೆಯನ್ನು ಎತ್ತಿ ಹಿಡಿದ ಬೌದ್ಧಧರ್ಮ ಸ್ವೀಕರಿಸಿ, ಬುದ್ದ ವಿಚಾರಗಳನ್ನು ತಮ್ಮ ಬೌದ್ಧ ಹಾಗೂ ದಮ್ಮ ಗ್ರಂಥ ಕೃತಿಯಲ್ಲಿ ಸಂಗ್ರಹಿಸಿದರು. 1956 ಡಿ.6 ರಂದು ಅಂಬೇಡ್ಕರ್ ಮರಣ ಹೊಂದಿದ ನಂತರ ಮಹಾಪರಿನಿರ್ವಾಣ ದಿನ ಎಂದು ಗೌರವದಿಂದ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ದೇಶದ ಧರ್ಮಗ್ರಂಥವಾಗಿದೆ. ಈ ಸಂವಿಧಾನದ ಆಶಯದಲ್ಲಿ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತಿವೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆಯೇ ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಅಂಬೇಡ್ಕರ್ ಅವರ ಆಶಯ ಈಡೇರಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ವಿ.ಅಪ್ಪು, ಖಜಾಂಚಿ ಡಿ.ಕುಮಾರಸ್ವಾಮಿ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿ ವಿ.ಚಂದ್ರಪ್ಪ, ಹೆಚ್.ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ನಾಕಿಕೆರೆ, ನಿರ್ದೇಶಕರಾದ ಜಿ.ಓ.ಎನ್.ಮೂರ್ತಿ, ಜಡೇಕುಂಟೆ ಮಂಜುನಾಥ, ಟಿ.ದರ್ಶನ್, ಎಸ್.ಬಿ.ರವಿಕುಮಾರ್ ಉಗ್ರಾಣ, ಪತ್ರಕರ್ತರಾದ ಗೊಂಡಬಾಳ ಬಸವರಾಜ್, ಸುರೇಶ್ ಪಟ್ಟಣ್, ಹನುಮಂತರಾಜ, ಆರ್.ಶಿವರಾಜ್ ಇದ್ದರು.