ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಜೊತೆಗೆ ಸಮಾಜ ಸುಧಾರಕರಾಗಿದ್ದರು.

ಹಗರಿಬೊಮ್ಮನಹಳ್ಳಿ: ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಜೊತೆಗೆ ಸಮಾಜ ಸುಧಾರಕರಾಗಿದ್ದರು ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಹೇಳಿದರು.ಪಟ್ಟಣದ ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶನಿವಾರ ಮಾತನಾಡಿದರು.

ಪರಿನಿರ್ವಾಣವು ಬೌದ್ಧ ಧರ್ಮದ ಪ್ರಮುಖ ತತ್ವಗಳು ಮತ್ತು ಗುರಿಗಳಲ್ಲಿ ಒಂದಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಅವರನ್ನು ಅವರ ಅನುಯಾಯಿಗಳು ಬೌದ್ಧ ನಾಯಕ ಎಂದು ಪರಿಗಣಿಸಿದ್ದರು. ಜನಪ್ರತಿನಿಧಿಗಳು ಸಂವಿಧಾನ ಬದ್ಧ ಸೌಲಭ್ಯಗಳನ್ನು ಒದಗಿಸುವ ಮೂಲಕವೂ ಉತ್ತಮ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೇರಿ ಎಚ್.ದೊಡ್ಡಬಸಪ್ಪ ಮಾತನಾಡಿ, ದೇಶಕ್ಕೆ ವಿಶ್ವಮಾನ್ಯ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಅವರ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ. ಶೋಷಿತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಇಂದಿಗೂ ಸರ್ಕಾರಗಳು ಸಮರ್ಪವಾಗಿ ಸಂವಿಧಾನದ ಮೂಲ ಆಶಯಗಳನ್ನು ಜಾರಿಗೊಳಿಸಿಲ್ಲ. ಅಸಮಾನತೆ, ಅಸ್ಪಷ್ಟತೆ ಆಚರಣೆ ಮಾಹಿತಿ ತಂತ್ರಜ್ಞಾನದ ಕಾಲಘಟ್ಟದಲ್ಲಿಯೂ ಅಸ್ತಿತ್ವದಲ್ಲಿರುವುದು ಬೇಸರದ ಸಂಗತಿ. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಪಿಎಸ್‌ಐ ಬಸವರಾಜ ಅಡವಿಬಾವಿ, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶನಾಯ್ಕ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಶೋಭಾ, ಕಂದಾಯ ನಿರೀಕ್ಷಕ ಶಿವಕುಮಾರಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ್, ಪುರಸಭೆ ಸದಸ್ಯರಾದ ಉಪ್ಪಾರ ಬಾಳಪ್ಪ, ಕಂದಾಯ ಅಧಿಕಾರಿ ಮಾರೆಣ್ಣ, ಸಮುದಾಯ ಸಂಘಟನಾಧಿಕಾರಿ ಬಸವರಾಜ, ಮುಖಂಡರಾದ ಅಡವಿಆನಂದೇವನಹಳ್ಳಿ ಪ್ರಭಾಕರ, ಕೋಗಳಿ ಉಮೇಶ, ಮಾದೂರು ಮಹೇಶ, ಕಾಳಿ ಬಸವರಾಜ, ಕಡಲಬಾಳು ಮಂಜುನಾಥ, ಬ್ಯಾಲಾಳು ಮಂಜುನಾಥ, ಮೇಘರಾಜ, ಪರುಶುರಾಮ ಇದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಗೆ ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.