ಅಂಬೇಡ್ಕರ್ ತತ್ವಾದರ್ಶ ಇಂದಿಗೂ ಪ್ರಸ್ತುತ: ಎಸ್.ಮರಿಸ್ವಾಮಿ

| Published : Apr 17 2024, 01:16 AM IST

ಸಾರಾಂಶ

ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾರತದ ಸಾಮಾಜಿಕ-ಸಾಂಸ್ಕೃತಿಕ ನಾಯಕರಾಗಿ ಭಾರತೀಯ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಹೊಸಪೇಟೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ತತ್ವಾದರ್ಶ ಇಂದಿಗೂ ಪ್ರಸ್ತುತವಾಗಿದೆ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರಿನ ಸ್ಫೂರ್ತಿಧಾಮ ಸಂಸ್ಥಾಪಕ ಅಧ್ಯಕ್ಷ ಎಸ್.ಮರಿಸ್ವಾಮಿ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಆಯೋಜಿಸಿದ್ದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಸಾಮಾಜಿಕ-ಸಾಂಸ್ಕೃತಿಕ ನಾಯಕರಾಗಿ ಭಾರತೀಯ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಜಾತಿ ಪದ್ಧತಿ ಆಳವಾಗಿ ಬೇರೂರಿದ್ದ ಸಂದರ್ಭದಲ್ಲಿ ಸಾಕಷ್ಟು ನೋವು ಅವಮಾನಗಳನ್ನು ಎದುರಿಸಿದರು. ಸಮಾಜಕ್ಕೆ ಅಂಟಿದ ಮೇಲು-ಕೀಳಿನ ತಾರತಮ್ಯವನ್ನು ಕತ್ತಿ ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವೇ ಇಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಜಗತ್ತಿಗೆ ಶಿಕ್ಷಣದ ಮಹತ್ವವನ್ನು ಸಾರಿದ ಧೀಮಂತ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಆಗಿದ್ದಾರೆ ಎಂದರು.

ಚಿಂತಕಿ ಎನ್.ಡಿ. ವೆಂಕಮ್ಮ ಮಾತನಾಡಿ, ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರಂತೆ ಎಲ್ಲರೂ ಶಿಕ್ಷಣದ ಮೂಲಕ ಸಮಾಜದಲ್ಲಿರುವ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಇಬ್ಬರು ಮಹನೀಯರ ಆದರ್ಶ ತತ್ವಗಳನ್ನು ನಾವು ಪಾಲಿಸಬೇಕು ಎಂದರು.

ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಗತ್ತಿನ ನಾಯಕರು, ಆದರೆ ಅವರನ್ನು ಇಂದು ಕೇವಲ ಜಾತಿ, ಸಮುದಾಯದ ಹಾಗೂ ಧರ್ಮದ ನಾಯಕರೆಂದು ಬಿಂಬಿಸುತ್ತಿರುವುದು ನೋವಿನ ಸಂಗತಿ. ಈ ಮಹನೀಯರನ್ನು ಅಂಬೇಡ್ಕರ್ ಹಾಗೂ ಜಗಜೀವನ್ ನಗರ, ವೃತ್ತ ಹಾಗೂ ಭವನ ಎಂದು ಭೌತಿಕವಾಗಿ ನೋಡದೆ ಅವರ ಭೌದ್ಧಿಕ ಅಂಶಗಳನ್ನು ಜೀವನದಲ್ಲಿ ಅನುಸರಿಸಿದಾಗ ಮಾತ್ರ ಅವರ ಆಶಯ ಸಾಕಾರಗೊಳ್ಳುತ್ತದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ, ಪ್ರಸ್ತುತ ದಿನಗಳಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಈ ಇಬ್ಬರು ಮಹನೀಯರು ಆತ್ಮಸಾಕ್ಷಿಯ ಪ್ರಜ್ಞೆಆಗಿದ್ದಾರೆ. ಸಾಮಾಜಿಕ ಸಮಾಜದ ಉಸಿರಾಗಿದ್ದ ಅವರನ್ನು ಜಾತಿ ವ್ಯವಸ್ಥೆಯ ಮೂಲಕ ನೋಡದೆ ಜಗತ್ತಿನ ಸಾರ್ವತ್ರಿಕ ವ್ಯಕ್ತಿಗಳಾಗಿ ನೋಡಬೇಕಾಗಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಇದ್ದರು. ಚರಿತ್ರೆ ಅಧ್ಯಯನ ವಿಭಾಗದ ಸಂಶೋಧನಾರ್ಥಿಗಳಾದ ಮಣಿಕಂಠ ಅಂಗಾಳ, ನರಸಿಂಹರಾಜು ನಿರ್ವಹಿಸಿದರು.