ರಾಮನಗರ: ಅಸಮಾನತೆಯ ವಿರುದ್ಧ ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಹಾಗೂ ಕಾನೂನು ನೆರವಿನ ಮೂಲಕ ಇಂದು ನಾವೆಲ್ಲರೂ ಹೋರಾಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ದಾರಿ ಹಾಗೂ ಶಕ್ತಿ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಹೇಳಿದರು.

ರಾಮನಗರ: ಅಸಮಾನತೆಯ ವಿರುದ್ಧ ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಹಾಗೂ ಕಾನೂನು ನೆರವಿನ ಮೂಲಕ ಇಂದು ನಾವೆಲ್ಲರೂ ಹೋರಾಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ದಾರಿ ಹಾಗೂ ಶಕ್ತಿ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ 69ನೇ ಮಹಾ ಪರಿನಿರ್ವಾಣ ದಿನ ಆಚರಣೆ ಪ್ರಯುಕ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಅಂದಿನ ಕಾಲದಲ್ಲಿ ಶಿಕ್ಷಣವೇ ಅಲಭ್ಯವಾಗಿದ್ದ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು ಪಡೆದರು. ಅವರು ಮಾಡಿದಂತಹ ಹೋರಾಟದ ಕಿಚ್ಚು ಹಾಗೂ ಅವರಲ್ಲಿದ್ದಂತಹ ದೃಢತೆಯನ್ನು ನಾವೆಲ್ಲರೂ ಸ್ಮರಿಸಬೇಕು. ಅಂಬೇಡ್ಕರ್ ಅವರನ್ನು ಎಷ್ಟು ಸ್ಮರಣೆ ಮಾಡಿದರು ಸಾಲದು. ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾನವ ಕುಲಕ್ಕೆ ಅಸಮಾನತೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ. ಅವರು ಮಾಡಿದ ಹೋರಾಟಗಳ ಫಲ ನಮ್ಮ ಇಂದಿನ ಜೀವನದ ಸುಧಾರಣೆ. ಅಂಬೇಡ್ಕರ್ ಅವರು ಹಾಕಿಕೊಟ್ಟ ವಿಧಿವಿಧಾನಗಳ ಪಾಲನೆ ಅತ್ಯವಶ್ಯಕವಾಗಿದೆ ಎಂದರು.

ಈ ದೇಶದಲ್ಲಿ ಅಸಮಾನತೆ, ತುಂಬಿ ತುಳುಕುತ್ತಿದ್ದ, ಶೋಷಿತ ಸಮಾಜವನ್ನು ನಿರ್ಮಾಣ ಮಾಡಿ ಬೆರಳಣಿಕೆಯಷ್ಟು ಜನ ಇಡೀ ಭಾರತವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡು ಶೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬುದ್ದ, ಬಸವ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರು ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತಂದರು. ಡಾ. ಬಿ.ಆರ್. ಅಂಬೇಡ್ಕರ್‌ರವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಬುದ್ದ, ಬಸವಣ್ಣನವರು ಹೇಗೆ ಚಿರಕಾಲ ಸ್ಮರಣೀಯರಾಗಿದ್ದಾರೋ, ಹಾಗೆಯೇ ಅಂಬೇಡ್ಕರ್ ಅವರು ಮಾಡಿರುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅವರು ಸದಾ ಸ್ಮರಣೀಯರೆ ಎಂದು ಹೇಳಿದರು.

ಇಡೀ ಭರತ ಖಂಡದಲ್ಲಿ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳು ಅತೀ ಹೆಚ್ಚಾಗಿ ಕಂಡುಬರುತ್ತದೆ ಎಂದು ಉಪಮುಖ್ಯಮಂತ್ರಿಗಳು ಅವರ ಭಾಷಣಗಳಲ್ಲಿ ಹೇಳುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮನ್ನು ಅಗಲಿ 69 ವರ್ಷಗಳಾಗಿವೆ ಅವರ ನೆನಪು ಇಂದಿಗೂ ಪ್ರಸ್ತುತವಾಗಿದೆ. ಅಂಬೇಡ್ಕರ್ ಅವರ ಹೆಸರನ್ನು ರಸ್ತೆಗಳಿಗೆ, ಸಂಘ-ಸಂಸ್ಥೆಗಳಿಗೆ, ಕೇಂದ್ರಗಳಿಗೆ, ಅವರ ಪ್ರತಿರೂಪವನ್ನು ವಿಗ್ರಹಗಳ ಮೂಲಕ ಸ್ಥಾಪಿಸುವುದನ್ನು 70 ವರ್ಷಗಳ ನಂತರವೂ ಮಾಡುತ್ತಿದ್ದೇವೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ಎಂದರು.

ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ಅವರಿಗೆ ಗೌರವ ಸಲ್ಲಿಸೋಣ. ಡಾ.ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಗಳು, ಆದರ್ಶಗಳನ್ನು ಕಾಪಾಡಿಕೊಳ್ಳುವುದು ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸದಸ್ಯರಾದ ಚೆಲುವರಾಜು, ಕುಂಬಾಪುರ ಬಾಬು, ಶಿವು ಜೆ.ಎಲ್., ಸಮುದಾಯದ ಮುಖಂಡರಾದ ಶಿವಕುಮಾರ ಸ್ವಾಮಿ, ಬಿ.ವಿ.ಎಸ್. ವೆಂಕಟೇಶ್, ಗೋವಿಂದಯ್ಯ ಉಪಸ್ಥಿತರಿದ್ದರು.

6ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ 69ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.