ತಹಸೀಲ್ದಾರ್ ನಾಗವೇಣಿ ಹೇಳಿಕೆ । ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಅಸಮಾನತೆಯ ವಿರುದ್ಧ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಫಲವಾಗಿ ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಆದರ್ಶ ಮತ್ತು ತತ್ವ ಸಿದ್ಧಾಂತಗಳು ಕಾಲಕ್ಕೂ ಸ್ಪೂರ್ತಿಯಾಗಿವೆ ಎಂದು ತಹಸೀಲ್ದಾರ್ ನಾಗವೇಣಿ ಹೇಳಿದರು.

ಪಟ್ಟಣದ ಆಡಳಿತ ಸೌದದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಭಾರತದ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಅವರ ತತ್ವ ಸಿದ್ಧಾಂತ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಧ್ವನಿಯೇ ಇಲ್ಲದೆ ಬದುಕುತ್ತಿದ್ದ ಅಸಂಖ್ಯಾತ ಶೋಷಿತ ಸಮುದಾಯಗಳಿಗೆ ಗಟ್ಟಿ ಧ್ವನಿಯಾಗಿದ್ದ ಬಾಬಾ ಸಾಹೇಬರ ವಿಚಾರ ಧಾರೆಗಳ ಪುಟಗಳನ್ನು ತಿರುವಿ ಹೋದಂತೆ ಹೊಸ ಹೊಸ ವಿಚಾರಗಳು ,ಕಟು ಸತ್ಯಗಳು, ಬದುಕಿಗೆ ಪ್ರೇರಣೆ ತುಂಬುವ ಘಟನೆಗಳು ಸಿಗುತ್ತವೆ. ಹಾಗಾಗಿ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಬಾಳಬೇಕೆಂದು ತಿಳಿಸಿದರು.

ಈ ವೇಳೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ದಲಿತ ಮುಖಂಡರಾದ ಪರಮೇಶ್, ನಾಗಭೂಷಣ, ಡಿ.ಒ.ಮುರಾರ್ಜಿ ನಾಗರಾಜ್ ರಾಜ್ಯ ರೈತ ಸಂಘದ ಬೇಡರಹಳ್ಳಿ ಬಸವರೆಡ್ಡಿ, ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಪ್ಪ, ಉಪ ತಹಸೀಲ್ದಾರ್ ಮಹಾಂತೇಶ್, ಸಿಡಿಪಿಒ ನವೀನ್ ಕುಮಾರ್, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಅಧಿಕಾರಿ ನಾಸಿರ್ ಹುಸೇನ್, ಜಗದೀಶ್, ಹಾಲೇಶ್, ಗುರುಸಿದ್ದಪ್ಪ ಕವಿರಾಜ್ ರಂಗಣ್ಣ ಮುಖಂಡರಾದ, ಹನುಮಂತಪ್ಪ ಗಂಗಾಧರ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮರ್ಲಹಳ್ಳಿ ರವಿಕುಮಾರ್ ಉಪಸ್ಥಿತರಿದ್ದರು.