ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಶೃಂಗೇರಿಗೆ ಭೇಟಿ ನೀಡಿದರು.
ಪುತ್ತೂರು: ಧರ್ಮವನ್ನು ಎಲ್ಲಾ ಕಾಲದಲ್ಲಿಯೂ ಅನುಸರಿಸಬೇಕು. ಧರ್ಮ ಮೀರಿದ ಬದುಕು ಸುಖ ಕಳೆದುಕೊಳ್ಳುತ್ತದೆ. ಆಧುನಿಕ ವ್ಯವಸ್ಥೆಗಳು, ಸೌಕರ್ಯಗಳು ಬೆಳೆದಂತೆ ಅದರಿಂದಾಗಿಯೇ ಮೂಡುವ ದುಃಖವೂ ಹೆಚ್ಚಾಗುತ್ತಿದೆ. ಹಾಗಾಗಿ ಧರ್ಮದ ಹಾದಿಯಲ್ಲಿ ಮುನ್ನಡೆಯುವುದೇ ನಮ್ಮ ಬದುಕಿನಲ್ಲಿ ಸುಖವನ್ನು ಕಾಣುವ ವಿಧಾನ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದ್ದಾರೆ.ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾಭ್ಯಾಸವು ನಮ್ಮನ್ನು ದೃಢವಾಗಿ ಪ್ರಪಂಚದ ಮುಂದೆ ನಿಲ್ಲುವಂತೆ ಮಾಡುತ್ತದೆ. ಪ್ರತಿಯೊಂದು ವಿದ್ಯೆಯೂ ಸಮಾಜಕ್ಕೆ ಒಂದಲ್ಲ ಒಂದು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ವಿದ್ಯೆಯನ್ನು ನಾವು ಎಷ್ಟು ಸ್ವಾಧೀನ ಮಾಡಿಕೊಳ್ಳುತ್ತೇವೋ ಅಷ್ಟರಮಟ್ಟಿಗೆ ನಾವು ಬೆಳೆಯುತ್ತೇವೆ ಎಂದರು.ಧರ್ಮದ ಬಗೆಗೆ ಅಪಪ್ರಚಾರ ಮಾಡುವವರು, ತಪ್ಪಾದ ವ್ಯಾಖ್ಯಾನ ಮಾಡುವವರಿದ್ದಾರೆ. ಇದು ಹಿಂದಿನ ಕಾಲದಲ್ಲಿಯೂ ಇತ್ತು. ಆದಾಗ್ಯೂ ನಮ್ಮ ಸನಾತನ ಧರ್ಮ, ಸಂಸ್ಕೃತಿಗಳು ಈವತ್ತಿಗೂ ಉಳಿದುಕೊಳ್ಳುವುದಕ್ಕೆ ಕಾರಣ ಆದಿ ಶಂಕರಾಚಾರ್ಯರು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ೨೦೧೭ರ ನಂತರ ನಿರಂತರವಾಗಿ ಪ್ರತಿವರ್ಷ ಅಂಬಿಕಾದ ವಿದ್ಯಾರ್ಥಿಗಳನ್ನು ಶೃಂಗೇರಿಗೆ ಕರೆತಂದು ಶಾರದಾಮಾತೆಯ, ಜಗದ್ಗುರುಗಳ ಆಶಿರ್ವಾದ ಯಾಚಿಸುತ್ತಿದ್ದೇವೆ. ಇಡಿಯ ದೇಶದ ರಾಯಭಾರಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳುವ ಕನಸಿನೊಂದಿಗೆ ಶಿಕ್ಷಣ ಒದಗಿಸಿಕೊಡಲಾಗುತ್ತಿದೆ. ಈ ಕಾರ್ಯಕ್ಕೆ ಜಗದ್ಗುರುಗಳ ಆಶೀರ್ವಾದ ಮುಖ್ಯ ಎಂದರು.ಅಂಬಿಕಾ ಪದವಿಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಮತ್ತಿತರರಿದ್ದರು.