ಸಾರಾಂಶ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುತಾಲೂಕಿನ ಬಿಜಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿದ್ದ 108 ಆ್ಯಂಬುಲೆನ್ಸ್ ಇಲ್ಲದಿರುವ ಪರಿಣಾಮ ಈ ಭಾಗದ ರೋಗಿಗಳು ತುರ್ತು ಸೇವೆಗಾಗಿ ಕಳೆದೆರಡು ತಿಂಗಳಿಂದ ಪರಿತಪಿಸುವಂತಾಗಿದೆ.
ಬಿಜಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಕ್ಕಾಗಿ ದಶಕದ ಹಿಂದೆ ನೀಡಿದ್ದ 108 ವಾಹನ ಆರೋಗ್ಯ ಇಲಾಖೆ ಹಿಂಪಡೆದು ತಾಲೂಕು ಕೇಂದ್ರ ಸ್ಥಾನದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಪರಿಣಾಮ ಕಸಬಾ ಹೋಬಳಿ ವ್ಯಾಪ್ತಿ ವಿವಿಧ ಹಳ್ಳಿಗಳ ಜನರು ತುರ್ತು ಸೇವೆಗಾಗಿ ಪರದಾಡುವಂತಾಗಿದೆ.ತಾಲೂಕಿನ ಕಸಬಾ ಸೇರಿ ಚಳ್ಳಕೆರೆ ತಾಲೂಕಿನ 60ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೇವೆ ಒದಗಿಸುತ್ತಿದ್ದ 108 ಪ್ರಸ್ತುತ ಕಳೆದೆರೆಡು ತಿಂಗಳಿಂದ ತಾಲೂಕು ಕೇಂದ್ರ ವ್ಯಾಪ್ತಿಗೆ ವರ್ಗಾವಣೆಗೊಂಡಿದೆ. ಪರಿಣಾಮವಾಗಿ ತುರ್ತು ಸಂದರ್ಭಕ್ಕಾಗಿ ಕರೆ ಮಾಡಿದ್ದಲ್ಲಿ ಕೇಂದ್ರ ಸ್ಥಾನದಿಂದ ಆ್ಯಂಬುಲೆನ್ಸ್ ಬರುವ ದಾರಿಯನ್ನೇ ಕಾಯುವಂತ ಸ್ಥಿತಿ ಎದುರಾಗಿದೆ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಈ ಭಾಗದಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯ ಇಂತಹ ಸಂದರ್ಭದಲ್ಲಿ ದೂರದ ಕೇಂದ್ರ ಸ್ಥಾನದಲ್ಲಿರುವ 108 ವಾಹನ ಬರುವುದು ಸ್ವಲ್ಪ ತಡವಾದರೂ ರೋಗಿ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು ಎನ್ನುವುದು ಈ ಬಾಗದ ಜನತೆ ಆತಂಕವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಹಳ್ಳಿಗಳಲ್ಲಿ ತುರ್ತು ಕರೆ ಮಾಡಿದ್ದಲ್ಲಿ ತಾಲೂಕು ಕೇಂದ್ರ ಸ್ಥಾನದಿಂದ 25ಕಿ.ಮೀ ದೂರದಲ್ಲಿರುವ 108 ಆ್ಯಂಬುಲೆನ್ಸ್ ಬರುವುದಕ್ಕೆ ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಬೇಕಾಗಿರುವ ರೋಗಿಗೆ ಸಕಾಲಕ್ಕೆ ಪ್ರಾಥಮಿಕ ಚಿಕಿತ್ಸೆ ಇಲ್ಲದಾಗುತ್ತದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಾಗೂ ತಳಕು ಭಾಗದಲ್ಲಿ ಇರುವ ವಾಹನ ಬರುವಿಕೆ ಕಾಯುವಂತ ಅನಿವಾರ್ಯತೆ ಎದುರಾಗುತ್ತದೆ.ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಬಿಜಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಳೆದ ಬಾರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಿ ಮೇಲ್ಧರ್ಜೆಗೇರಿಸಲಾಗಿದೆ. ಹೆದ್ದಾರಿಗೆ ಅಂಟಿಕೊಂಡಂತೆ ₹14 ಕೋಟಿ ವೆಚ್ಚದ ಸುಸಜ್ಜಿತ ಆಸ್ಪತ್ರೆ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನಾ ಬಾಗ್ಯ ಕಾಣಲಿದೆ. ಈಗಿದ್ದರೂ ಇಲ್ಲಿದ್ದ 108 ಆ್ಯಂಬುಲೆನ್ಸ್ ವಾಹನ ತಾಲೂಕು ಕೇಂದ್ರ ಸ್ಥಾನಕ್ಕೆ ನಿಯೋಜಿಸಿರುವುದು ಸುತ್ತಲಿನ ಹಳ್ಳಿಗಳ ಜನತೆಗೆ ತುರ್ತು ಚಿಕಿತ್ಸೆ ಮರೀಚಿಕೆಯಾಗಿ ಕಾಡುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ತಾಲೂಕು ಕೇಂದ್ರ ಸ್ಥಾನಕ್ಕೆ ನಿಯೋಜಿಸಿರುವ 108 ಆ್ಯಂಬುಲೆನ್ಸ್ ವಾಹನವನ್ನು ಬಿಜಿಕೆರೆ ಗ್ರಾಮಕ್ಕೆ ನೀಡಬೇಕೆಂದು ಜನತೆ ಆಗ್ರಹವಾಗಿದೆ.
ಸರ್ಕಾರದ ನಿಯಮದಂತೆ ಇಲ್ಲಿನ 108 ವಾಹನವನ್ನು ಕೇಂದ್ರ ಸ್ಥಾನಕ್ಕೆ ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇರುವ ಪರಿಣಾಮ ತುರ್ತು ಸಂದರ್ಭಕ್ಕೆ 108 ವಾಹನ ಅಗತ್ಯ ಇದ್ದು, ಆ್ಯಂಬುಲೆನ್ಸ್ ನೀಡುವಂತೆ ಮೇಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.- ಡಾ.ಮಧುಕುಮಾರ್. ತಾಲೂಕು ಆರೋಗ್ಯ ಅಧಿಕಾರಿ ಮೊಳಕಾಲ್ಮುರು
ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಬಿಜಿಕೆರೆ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ತುರ್ತು ಸಂದರ್ಭಕ್ಕೆ 108 ಆ್ಯಂಬುಲೆನ್ಸ್ ಅನಿವಾರ್ಯ ಇದ್ದರೂ ಬೇರೆಡೆ ನಿಯೋಜಿಸಲಾಗಿದೆ. ಸಂಬಂದಿಸಿದ ಅಧಿಕಾರಿಗಳು ಆ್ಯಂಬುಲೆನ್ಸ್ ವಾಹನವನ್ನು ಕೂಡಲೇ ನೀಡಬೇಕು.- ಎಸ್.ಜಯಣ್ಣ. ಗ್ರಾಪಂ ಅಧ್ಯಕ್ಷ ಬಿಜಿಕೆರೆ