ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಅಪಘಾತಕ್ಕೆ ಒಳಗಾದ ರಾಸುಗಳನ್ನು ಪಶು ಆಸ್ಪತ್ರೆಗೆ ಸಾಗಿಸಲು ಅಗತ್ಯವಿರುವ ಹೊಸ ಆ್ಯಂಬುಲೆನ್ಸ್‌ಅನ್ನು ತಮ್ಮ ತಂದೆ- ತಾಯಿ ಹೆಸರಿನ ಎಸ್‌ಟಿಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನ್ಮುಲ್ ಒಕ್ಕೂಟಕ್ಕೆ ಉಚಿತವಾಗಿ ಕೊಡುಗೆ ನೀಡಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನ ರುತ್ವಿ ಅಕ್ಷಯ್ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕಿನ ಹಾಲು ಉತ್ಪಾಕರ ಸಹಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಅವರಿಗೆ ಅಭಿನಂದನೆ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯರಿಗೆ ಅನಾಹುತಗಳು ಸಂಭವಿಸಿದಾಗ ಅವರನ್ನು ಆಸ್ಪತ್ರೆಗಳಿಗೆ ಸಾಕಾಣಿಕೆ ಮಾಡಲು ಆ್ಯಂಬುಲೆನ್ಸ್‌ಗಳ ಅನುಕೂಲವಿದೆ. ಆದರೆ, ರಾಸುಗಳ ಸಾಕಣಿಕೆ ಮಾಡಲು ಆ್ಯಂಬುಲೆನ್ಸ್ ಗಳ ಕೊರತೆ ಇದೆ. ಆದ್ದರಿಂದ ಅಪಘಾತವಾದ ರಾಸುಗಳನ್ನು ಪಶು ಆಸ್ಪತ್ರೆಗಳಿಗೆ ಸಾಕಾಣಿಕೆ ಮಾಡಲು ಅಗತ್ಯ ಇರುವ ಹೊಸ ಆ್ಯಂಬುಲೆನ್ಸ್ ವೈಯುಕ್ತಿಕವಾಗಿ ತಮ್ಮ ತಂದೆ- ತಾಯಿ ಹೆಸರಿನಲ್ಲಿ ಕೊಡುಗೆ ನೀಡಲಾಗುವುದು ಎಂದರು.ತಾಲೂಕಿನಲ್ಲಿ 9 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿದೆ, ಇನ್ನೂ 5 ಸಾವಿರ ರಾಸುಗಳಿಗೆ ವಿಮೆ ಮಾಡಿಲ್ಲ. ರೈತರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಸುಮಾರು 5 ಸಾವಿರ ರಾಸುಗಳಿಗೆ ಪ್ರತಿವರ್ಷ ರೈತರು ಪಾವತಿ ಮಾಡುವ ಶೇ.50ರಷ್ಟು ವಿಮೆ ಹಣವನ್ನು ಸಹ ನಮ್ಮ ಎಸ್ ಟಿಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುವುದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕರ ಅನುದಾನವನ್ನು ಡೇರಿ ಕಟ್ಟಡಗಳಿಗೆ ನೀಡಲು ಅವಕಾಶವಿರಲಿಲ್ಲ. ನಾನು ಶಾಸಕನಾಗಿದ್ದ ವೇಳೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಶಾಸಕರ, ವಿಧಾನಪರಿಷತ್ ಸದಸ್ಯರ ಅನುದಾನವನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಸಿಕೊಟ್ಟ ಪರಿಣಾಮವಾಗಿ ತಾಲೂಕಿನ ಹಲವಾರು ಡೇರಿ ಕಟ್ಟಡಗಳ ಅಭಿವೃದ್ಧಿಗೆ ಅನುದಾನ ಕೊಟ್ಟು ಅಭಿವೃದ್ಧಿಪಡಿಸಲಾಗಿದೆ ಎಂದರು.ನೂತನ ನಿರ್ದೇಶಕರು ಕಟ್ಟಡ ನಿರ್ಮಿಸಿ ಡೇರಿ ಕಾರ್ಯದರ್ಶಿಗಳ ಕಚೇರಿ ನಡೆಸಲು ಕೊಠಡಿಯ ಅನುಕೂಲ ಮಾಡಿಕೊಡಬೇಕು, ಜತೆಗೆ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಗ್ರಾಮಗಳಿಗೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡಿಸಿಕೊಡುವಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸೂಚಿಸಿದರು.
ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಅಧಿಕಾರಿಗಳು, ರೈತರು ಹಾಗೂ ಡೇರಿ ಕಾರ್ಯದರ್ಶಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಚುನಾವಣೆಯಲ್ಲಿ ಪಕ್ಷಾತೀತವಾಗಿ ನನಗೆ ಮತಕೊಟ್ಟು ಗೆಲ್ಲಿಸಿದ್ದೀರಾ. ಮುಂದಿನ ದಿನಗಳಲ್ಲಿ ನಾವೆಲ್ಲ ಕುಟುಂಬದ ಸದಸ್ಯರಂತೆ ಜತೆಗೂಡಿ ಸಹಕಾರ ಸಂಘದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ತಿಳಿಸಿದರು.ಇದೇ ವೇಳೆ ಮನ್ಮುಲ್ ನೂತನ ನಿರ್ದೇಶಕ ಎಸ್.ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಅತಿಹೆಚ್ಚು ಹಾಲು ಪೂರೈಕೆ ಮಾಡಿದ ಡಿಂಕಾ ಗ್ರಾಮದ ರೈತ ಮಹಿಳೆ ಮಂಗಳಮ್ಮ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದಿಂದ 20.55 ಲಕ್ಷ ಮೌಲ್ಯದ ರಾಸುಗಳ ವಿಮೆ ಹಣದ ಚೆಕ್ ನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಒಕ್ಕೂಟ ಅಧ್ಯಕ್ಷ ಡಿಂಕಾ ಶಿವಪ್ಪ, ಉಪಾಧ್ಯಕ್ಷ ಬೋರೇಗೌಡ, ಕಾರ್‍ಯದರ್ಶಿ ಪ್ರಸಾದ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಸಹಕಾರಿ ಯೂನಿಯನ್ ನಿರ್ದೇಶಕ ವಿ.ಎಸ್.ನಿಂಗೇಗೌಡ, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ರಾಮಕೃಷ್ಣೇಗೌಡ, ರಾಧಾಕೃಷ್ಣ, ಮಹದೇವು, ಗಿರೀಶ್, ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕರಾದ ಡಾ.ಸಂತೋಷ್, ಡಾ.ಪ್ರಕಾಶ್ ಸೇರಿ ಎಲ್ಲಾ ಮಾರ್ಗ ವಿಸ್ತರಣಾಧಿಕಾರಿಗಳು, ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.