ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಅಮೆರಿಕಾ ನೆರವು

| Published : Jan 05 2024, 01:45 AM IST / Updated: Jan 05 2024, 02:54 PM IST

ಸಾರಾಂಶ

ಮೈಸೂರಿನ ಪ್ರಮುಖ ಹಾಗೂ ಕಲಾತ್ಮಕ ಪಾರಂಪರಿಕ ಕಟ್ಟಡವಾದ ಮಾನಸ ಗಂಗೋತ್ರಿ ಜಯಲಕ್ಷ್ಮೀ ವಿಲಾಸ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಅಮೆರಿಕಾ ಮಿಷನ್‌ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಪ್ರಮುಖ ಹಾಗೂ ಕಲಾತ್ಮಕ ಪಾರಂಪರಿಕ ಕಟ್ಟಡವಾದ ಮಾನಸ ಗಂಗೋತ್ರಿ ಜಯಲಕ್ಷ್ಮೀ ವಿಲಾಸ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಅಮೆರಿಕಾ ಮಿಷನ್‌ ಮುಂದಾಗಿದೆ.

ಮೆಸೂರು ವಿವಿ ಕ್ರಾಫರ್ಡ್‌ಹಾಲ್‌ನಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಚೆನ್ನೈನ ಅಮೆರಿಕಾ ಕಾನ್ಸಲ್‌ ಜನರಲ್‌ ಕ್ರಿಸ್ಟೋಫರ್‌ ಡಬ್ಲ್ಯೂ. ಹಾಡ್ಜಸ್‌ ಅವರು, ಅಮೆರಿಕಾ ಸರ್ಕಾರದ ಅಂಬಾಸರಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಷನ್‌ ಮೂಲಕ ಧನ ಸಹಾಯ ಪಡೆಯಲಾಗುತ್ತಿದೆ. ಶಿಥಿಲಾವಸ್ಥೆ ತಲುಪಿರುವ ಈ ಪಾರಂಪರಿಕ ಕಟ್ಟಡದ ಪಶ್ಚಿಮ ವಿಭಾಗ ಮತ್ತು ಕರ್ನಾಟಕ ರಾಜ್ಯಾದ್ಯಂತ ಸಂಗ್ರಹಿಸಲಾದ 6,500ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಈ ಅನುದಾನ ಬಳಸಲಾಗುತ್ತದೆ ಎಂದರು.

ಜಯಲಕ್ಷ್ಮೀ ವಿಲಾಸ್ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣೆಗೆ ನೀಡಿರುವ ಬೆಂಬಲವು ಭಾರತದ ಜನರು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತು ಅಮೆರಿಕ ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಪುರಾವೆಯಾಗಿದೆ ಎಂದು ಅವರು ತಿಳಿಸಿದರು.

ಕಳೆದ 20 ವರ್ಷಗಳಲ್ಲಿ ಯುಎಸ್ ಮಿಷನ್ ಇಂಡಿಯಾದ ಎ.ಎಫ್‌.ಸಿ.ಪಿ ನೀಡಿರುವ ಎರಡನೇ ಅತಿದೊಡ್ಡ ಮೊತ್ತ. ಇದರಿಂದ ಸಾಂಸ್ಕೃತಿಕ ಪರಂಪರೆ ಕಾಪಾಡುವ ಸಂರಕ್ಷಿಸುವ ಬಗ್ಗೆ ಕಳಕಳಿ ಹೊಂದಿರುವ ತಜ್ಞರು, ವಾಸ್ತುಶಿಲ್ಪಿಗಳು, ವಿನ್ಯಾಸಕರರು, ನುರಿತ ಕುಶಲಕರ್ಮಿಗಳನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯವು ಡೆಕ್ಕನ್‌ ಹೆರಿಟೇಜ್‌ ಫೌಂಡೇಷನ್‌ ಸಹಭಾಗಿತ್ವದಲ್ಲಿ ಪುನರುದ್ಧಾರ ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜಯಲಕ್ಷ್ಮೀ ವಿಲಾಸ ಮ್ಯಾನ್ಷನ್‌ ಜಾನಪದ ವಸ್ತು ಸಂಗ್ರಹಾಲಯದ ಸಂರಕ್ಷಣಾ ಯೋಜನೆಗೆ ನೀಡಿರುವ ಬೆಂಬಲವು ಭಾರತದ ಜನರು ಮತ್ತು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತಂತೆ ಅಮೆರಿಕ ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಮತ್ತೊಂದು ಪುರಾವೆಯಾಗಿದೆ.

ಒಮ್ಮೆ ಪೂರ್ಣಗೊಂಡ ನಂತರ, ಜಯಲಕ್ಷ್ಮೀ ವಿಲಾಸ ಮ್ಯಾನ್ಷನ್‌ ಮತ್ತು ಜಾನಪದ ವಸ್ತು ಸಂಗ್ರಹಾಲಯವು ಭವಿಷ್ಯದ ಪೀಳಿಗಯ ಭಾರತೀಯರು ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಯಲಕ್ಷ್ಮೀ ವಿಲಾಸ ಜಾನಪದ ವಸ್ತುಸಂಗ್ರಹಾಲಯದ ಅಭಿವೃದ್ಧಿಗೆ ಅಮೆರಿಕ ರಾಯಭಾರ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಚೆನ್ನೈನ ಅಮೆರಿಕ ರಾಯಭಾರ ನಿಧಿಯಿಂದ ಸಾಂಸ್ಕೃತಿಕ ಸಂರಕ್ಷಣೆಗೆ ಧನ ಸಹಾಯ ನೀಡಲಾಗಿದೆ. ನವೀಕರಣ ಮತ್ತು ಅಭಿವೃದ್ಧಿಗೆ ಅಂದಾಜು 2.4 ಕೋಟಿ (2.7 ಮಿಲಿಯನ್) ಅನುದಾನ ನೀಡಿದೆ. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮತ್ತು ಕ್ರಿಸ್ಟೋಫರ್‌ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಬಳಿಕ ಮೊದಲ ಕಂತಿನ ಚೆಕ್ ಅನ್ನು ಸ್ವೀಕರಿಸಿದರು. 

ಡೆಕ್ಕನ್ ಹೆರಿಟೇಜ್ ಫೌಂಡೇಷನ್‌ ಇಂಡಿಯಾ ಈಗಾಗಲೇ ಸಂರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಕಲಾಕೃತಿಗಳ ಸಂರಕ್ಷಣೆಯ ಜತೆಗೆ ಡಿಜಿಟಲೀಕರಣ ಮಾಡಲಾಗುತ್ತದೆ. ಈ ಹಿಂದೆ ಇನ್ಫೋಸಿಸ್ ಫೌಂಡೇಷನ್ ಅನುದಾನದಿಂದ ಮೇಲ್ಚಾವಣಿ ಅಭಿವೃದ್ಧಿಪಡಿಸಲಾಗಿತ್ತು. ಅಮೆರಿಕದ ಸಹಾಯದೊಂದಿಗೆ ಅಭಿವೃದ್ಧಿಗೊಳ್ಳಲಿರುವ ಜಯಲಕ್ಷ್ಮೀ ವಿಲಾಸ್ ಅರಮನೆಯೂ ಪ್ರವಾಸಿಗರನ್ನು ಆಕರ್ಷಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಕೇಂದ್ರವೂ ಆಗಲಿದೆ ಎಂದು ಅವರು ತಿಳಿಸಿದರು.

2012ರಲ್ಲಿ ಯುಎಸ್ ಕಾನ್ಸುಲೇಟ ಜನರಲ್ ಚೈನ್ನೈನಿಂದ ಓರಿಯೆಂಟಲ್ ರಿಸರ್ಚ್ ಇನ್‌ ಸ್ಟಿಟ್ಯೂಟ್‌ ಸಂರಕ್ಷಣೆ ಮತ್ತು 40 ಸಾವಿರ ಪುರಾತನ ತಾಳೆಗರಿ ಹಸ್ತಪ್ರತಿಗಳು ಮತ್ತು ಪುಸ್ತಕಗಳ ಅಮೂಲ್ಯ ಸಂಗ್ರಹಕ್ಕಾಗಿ ಅನುದಾನ ಪಡೆಯಲಾಗಿದೆ ಎಂದು ಅವರು ವಿವರಿಸಿದರು.

ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಇಂಡಿಯಾ ಅಧ್ಯಕ್ಷೆ ಲತಾ ರೆಡ್ಡಿ ಮಾತನಾಡಿ, ಈಗಾಗಲೇ ಕಾಮಗಾರಿ ಆರಂಭವಾಗಿದ್ದು, 2025ರಲ್ಲಿ ಪೂರ್ಣಗೊಳ್ಳಲಿದೆ. ಕಟ್ಟಡದ ವಾಸ್ತುಶಿಲ್ಪಕ್ಕೆ ಧಕ್ಕೆ ಆಗದಂತೆ ಕಾಮಗಾರಿ ನಿರ್ವಹಣೆ ಮಾಡುತ್ತೇವೆ. ಈ ವಸ್ತು ಸಂಗ್ರಹಾಲಯವು ವಿಶ್ವದ ಶ್ರೇಷ್ಠ ಸಂಗ್ರಹಾಲಯಗಳಲ್ಲಿ ಒಂದಾಗಲಿದೆ ಎಂದು ಅವರು ತಿಳಿಸಿದರು.

ಉಳಿದ ಭಾಗಕ್ಕೆ 30 ಕೋಟಿ ಯೋಜನೆ ಅರಮನೆಯ ಕಟ್ಟಡದ ಇತರ ಭಾಗವನ್ನು ಸಂರಕ್ಷಿಸಲು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ, ಉದ್ಯಮಿ ಹರೀಶ್ ಶಾ ನೇತೃತ್ವದ ಹರೀಶ್ ಬೀನಾ ಶಾ ಫೌಂಡೇಶನ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಲೋಕನಾಥ್‌ ವಿವರಿಸಿದರು.

ಯೋಜನಾ ಮೊತ್ತ 30 ಕೋಟಿ ಆಗಿದ್ದು, ಹಂತ ಹಂತವಾಗಿ ಒದಗಿಸಲಾಗುವುದು ಎಂದು ಹರೀಶ್ ಸಮ್ಮತಿಸಿದ್ದಾರೆ. ಕಾಮಗಾರಿಯು ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಹಂತ ಹಂತವಾಗಿ ಕಾಮಗಾರಿ ನಡೆಯಲಿದ್ದು, ಪುನರುಜ್ಜೀವನಕ್ಕೆ 5 ರಿಂದ 7 ವರ್ಷ ಬೇಕಾಗುತ್ತದೆ. ಇದಕ್ಕಾಗಿ ಪರಂಪರೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಅವರು ಹೇಳಿದರು.

ಮಣಿಪಾಲ್‌ ತಾಂತ್ರಿಕ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದ್ದಾಗ ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಈ ವಿವಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣೆಗೆ ಕೈಜೋಡಿಸಿರುವುದು ಖುಷಿ ನೀಡಿದೆ. ಇದು, ಮೈಸೂರಿನ ಹೆಗ್ಗುರುತಾಗಿ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು. ಕುಲಸಚಿವೆ ವಿ.ಆರ್. ಶೈಲಜಾ, ಹಣಕಾಸು ಅಧಿಕಾರಿ ಕೆ.ಎಸ್‌. ರೇಖಾ, ಇದ್ದರು.