ಪ್ರಬಂಧ ಸಾಹಿತ್ಯದಲ್ಲಿ ಸ್ವಚಿಂತನೆಗೆ ವಿಫುಲ ಅವಕಾಶ: ವೆಂಕಟೇಶ ಮಾಚಕನೂರು

| Published : Jul 31 2024, 01:08 AM IST

ಪ್ರಬಂಧ ಸಾಹಿತ್ಯದಲ್ಲಿ ಸ್ವಚಿಂತನೆಗೆ ವಿಫುಲ ಅವಕಾಶ: ವೆಂಕಟೇಶ ಮಾಚಕನೂರು
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ಐಬಿಎಂಆರ್ ಕಾಲೇಜಿನ ಸಭಾಭವನದಲ್ಲಿ ಇತ್ತೀಚಿಗೆ ಹೂಬಳ್ಳಿ ಲೇಖಕಿಯರ ಬಳಗದ ಸಹಯೋಗದಲ್ಲಿ ಪ್ರಬಂಧ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಾಹಿತ್ಯದ ಪ್ರಕಾರಗಳಲ್ಲಿ ಪ್ರಬಂಧ ಸಾಹಿತ್ಯ ಅತಿಮುಖ್ಯವಾಗಿದ್ದು, ಅದರ ನಡೆ, ಜತೆಗೆ ಕೃತಿಕಾರನ ಸೃಜನಶೀಲತೆಗೆ ಇಂಬು ನೀಡುವ ವಿಫುಲ ಅವಕಾಶ ಇವೆ ಎಂದು ಶಿಕ್ಷಣ ತಜ್ಞ ಹಾಗೂ ಪ್ರಬಂಧಕಾರ ವೆಂಕಟೇಶ ಮಾಚಕನೂರು ಅಭಿಪ್ರಾಯ ಪಟ್ಟರು.

ನಗರದ ಐಬಿಎಂಆರ್ ಕಾಲೇಜಿನ ಸಭಾಭವನದಲ್ಲಿ ಇತ್ತೀಚಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ ಹಾಗೂ ಹೂಬಳ್ಳಿ ಲೇಖಕಿಯರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಬಂಧ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂಗ್ಲಿಷ್ ಮೂಲದ ಎಸ್ಸೆ ಕನ್ನಡದ ಸಾಹಿತ್ಯ ಪ್ರಕಾರದಲ್ಲಿ ತನ್ನದೇ ಆದ ಸ್ವಂತಿಕೆಯನ್ನು ರೂಪಿಸಿಕೊಂಡಿದೆ. ಪ್ರಬಂಧವೆಂಬುದು ಒಂದು ಜಿಜ್ಞಾಸೆ, ಬದುಕಿನ ಸಮಗ್ರತೆಯನ್ನು ನೋಡುವ ವಿಧಾನವೂ ಹೌದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಪ್ರಬಂಧ ಸಾಹಿತ್ಯಕ್ಕೆ 200 ವರ್ಷಗಳ ಇತಿಹಾಸವಿದೆ, ನವೋದಯದ ಎಲ್ಲ ಪ್ರಸಿದ್ಧ ಸಾಹಿತಿಗಳೂ ಈ ಪ್ರಕಾರದಲ್ಲಿ ತಮ್ಮ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ ಎಂದರು.

ಪ್ರಬಂಧದಲ್ಲಿ ಸಹಜ ಲಾಲಿತ್ಯ ಒಡಮೂಡಬೇಕೆಂದರೆ, ಕನ್ನಡ ಸಾಹಿತ್ಯದ ಪ್ರಬಂಧದಲ್ಲಿ ತೀರಾ ಶಿಸ್ತುಬದ್ಧ ನಿಯಮ ಹಾಕಿಕೊಳ್ಳುವುದಾಗಲೀ, ಒಂದು ಚೌಕಟ್ಟು ನಿರ್ಮಿಸಿಕೊಳ್ಳುವುದಾಗಲೀ ಅಷ್ಟಾಗಿ ಸಲ್ಲದು. ಪ್ರಬಂಧಗಳ ಪ್ರಕಾರಗಳಾದ ಸಂಪ್ರಬಂಧ, ಲಲಿತ ಪ್ರಬಂಧ, ವಿಮರ್ಶಾ ಪ್ರಬಂಧ, ಹರಟೆ ಎಲ್ಲವಕ್ಕೂ ಅವುಗಳದ್ದೇ ಆದ ವೈಶಿಷ್ಠ್ಯಗಳಿವೆ ಎಂದರು.ಡಾ. ಪ್ರಜ್ಞಾ ಮತ್ತೀಹಳ್ಳಿ ಮಾತನಾಡಿ, ಪ್ರಬಂಧ ಹೆಣೆಯುವಲ್ಲಿ ಜೀವನದ ಅನುಭವ, ಅನುಭೂತಿ, ಜೊತೆಗಿಷ್ಟು ವೇದನೆಗಳನ್ನು ಸಾಂಧ್ರೀಕರಿಸಿಕೊಳ್ಳುವಿಕೆಯ ಜೊತೆ, ಶಬ್ಧ ಸಂಪತ್ತು ಕೂಡ ಬಹಳ ಮುಖ್ಯ ಎಂದರು.

ವಿಷಯದ ಕೇಂದ್ರ ಬಿಂದುವಿನ ಸುತ್ತ ಸಾಗುವಾಗ ಒಂದು ವಿಧದ ಬಿಗಿತಗಳನ್ನು ಉಳಿಸಿಕೊಂಡಾಗ ಒಳ್ಳೆಯ ಪ್ರಬಂಧ ರಚನೆಯಾಗುತ್ತದೆ. ಈ ಪ್ರಬಂಧವೆಂಬುದು ವಿಷಯಗಳ ಗಟ್ಟಿ ಬಂಧದ ಜೊತೆಗೆ ಹಿತವಾದ ಲಾಲಿತ್ಯ ಮೈಗೂಡಿಸಿಕೊಂಡ ವಿಶಿಷ್ಠವಾದ ಸಾಹಿತ್ಯ ಪ್ರಕಾರ ಎಂದರು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಬಂಧ ರಚನಾ ಪೂರ್ವದಲ್ಲಿ, ಆ ಪ್ರಕಾರವನ್ನು ಸಾಕಷ್ಟು ಓದಿಕೊಂಡಿರಬೇಕಾದ್ದು ಬಹಳ ಮುಖ್ಯ ಎಂದರು.

ಅಂಕಣಕಾರ ಪ್ರಶಾಂತ ಆಡೂರ ಅವರು, ತಮ್ಮ ಹರಟೆ ಮಾದರಿಯ ಪ್ರಬಂಧಗಳನ್ನು ಓದುವುದರ ಮೂಲಕ, ಪ್ರಬಂಧ ವಿಷಯ ವಸ್ತು ಮತ್ತೂ ರಚನಾ ಕೌಶಲ್ಯದ ಪರಿಚಯ ಮಾಡಿಕೊಟ್ಟರು. ನಂತರ ಕಮ್ಮಟದಲ್ಲಿ ಭಾಗವಹಿಸಿದ್ದವರ ಜೊತೆ ಸಂವಾದ ನಡೆಯಿತು. ಸಮಾಜ ಸೇವಕ ಗುರುರಾಜ ಕೌಜಲಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಿನಿ ರುದ್ರಮುನಿ ಪ್ರಾರ್ಥಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸುಶೀಲೇಂದ್ರ ಕುಂದರಗಿ ಸ್ವಾಗತಿಸಿದರು. ರೂಪಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸರೋಜಾ ಮೇಟಿ ವಂದಿಸಿದರು. ಅಭಾಸಾಪ ಕಿತ್ತೂರು ಕರ್ನಾಟಕದ ಸಂಚಾಲಕ ಜನಮೇಜಯ ಉಮರ್ಜಿ ನಿರೂಪಿಸಿದರು.

ಹುಬ್ಬಳ್ಳಿ ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟೀಮನಿ, ಕನ್ನಡ ಕಟ್ಟಾಳು ವೆಂಕಟೇಶ ಮರಗುದ್ದಿ, ಜೀವಿ ಕಲಾ ಬಳಗದ ಗದಿಗೆಯ್ಯ ಹಿರೇಮಠ, ರವಿ ಕಮಡೊಳ್ಳಿ, ಸಂಧ್ಯಾ ದೀಕ್ಷಿತ್, ಮಾಧವಿ ಕುಲಕರ್ಣಿ, ವೀಣಾ ಬರಗಿ, ಸುನಂದಾ ಶ್ಯಾಗೋಟಿ, ಲತಾ ಹೆಗಡೆ, ವಿರೂಪಾಕ್ಷ ಕಟ್ಟೀಮನಿ, ಆರ್.ಎಂ. ಗೋಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.