ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ರಾಜ್ಯದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ಹುಬ್ಬಳ್ಳಿ ಯುವತಿ ಕೊಲೆ ಪ್ರಕರಣವನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ.ಅವರು ಕಾರ್ಕಳ ವಿಕಾಸ ಚುನಾವಣಾ ಕಚೇರಿಯಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಹುಸಂಖ್ಯಾತರನ್ನು ಓಲೈಸದೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ರಾಜ್ಯದಲ್ಲಿ ಅಶಾಂತಿ ಇದೆ. ಬಹುಸಂಖ್ಯಾತರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣ ವಾಗಿದೆ. ರಾಜ್ಯದಲ್ಲಿ ಮತೀಯ ವಾದಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆಯೆ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷದ ಚೊಂಬು ಜಾಹೀರಾತಿನ ಉಲ್ಲೇಖಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಶೌಚಕ್ಕೆ ಚೊಂಬು ಹಿಡಿದು ಸಾಗುವ ಅನಿವಾರ್ಯತೆ ನಿರ್ಮಾಣವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಸುಮಾರು 12 ಸಾವಿರಕ್ಕೂ ಮಿಕ್ಕಿ ಶೌಚಾಲಯಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಜಾಹೀರಾತನ್ನು ವ್ಯಂಗ್ಯ ವಾಡಿದರು.
ಕುಚ್ಚಲಕ್ಕಿ ನೀಡುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದಲ್ಲಿಕುಚ್ಚಲಕ್ಕಿ ನೀಡುವುದು ಪ್ರಜಾಪ್ರಭುತ್ವ ದ ಕನಸಾಗಿದೆ. ಪಕ್ಷ ಅಧಿಕಾರದಲ್ಲಿದ್ದಾಗ, ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಪ್ರಸ್ತಾಪ ಮಾಡಿದ್ದೆ. ಆದರೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಸುಮಾರು ಆರು ಲಕ್ಷ ಕ್ವಿಂಟಾಲ್ ಬತ್ತ ಉತ್ಪಾದನೆಯಾಗಬೇಕಾಗಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಬಳಿಕ ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನ ಗೋಪಾಲ ಪೂಜಾರಿಯವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿಯೆ ಕುಚ್ಚಲಕ್ಕಿ ನೀಡುತ್ತೇನೆ ಎಂದು ಹೇಳಿದವರು ಎಲ್ಲಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.