ಪ್ರಜಾಪ್ರಭುತ್ವ ಉಳಿಸುವ ನೆಪದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರವಾಗಿ ಅಪನಂಬಿಕೆ ಮೂಡಿಸುವುದು, ಚುನಾವಣೆಯಲ್ಲಿ ಸೋತಾಗ ಮತಗಳ್ಳತನದ ಆರೋಪ ಮಾಡುವುದು ಹಾಗೂ ಪ್ರತಿಭಟನೆಗಳ ಮೂಲಕ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ.

ಹುಬ್ಬಳ್ಳಿ:

ಪ್ರಜಾಪ್ರಭುತ್ವ ಉಳಿಸುವ ನೆಪದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರವಾಗಿ ಅಪನಂಬಿಕೆ ಮೂಡಿಸುವುದು, ಚುನಾವಣೆಯಲ್ಲಿ ಸೋತಾಗ ಮತಗಳ್ಳತನದ ಆರೋಪ ಮಾಡುವುದು ಹಾಗೂ ಪ್ರತಿಭಟನೆಗಳ ಮೂಲಕ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಇಂತಹ ಬೆಳವಣಿಗೆಗಳ ಬಗ್ಗೆ ಯುವಜನರು ಎಚ್ಚರಿಕೆಯಿಂದಿದ್ದು, ಸತ್ಯಾಸತ್ಯತೆ ಅರಿತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ವಿಕಸಿತ ಭಾರತ ಅಭಿಯಾನದಡಿ ಆಯೋಜಿಸಿದ್ದ "ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ " ಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಲೋಕಸಭೆ ಅಧಿವೇಶನಕ್ಕೆ ಗೈರಾಗಿ ವಿದೇಶ ಪ್ರವಾಸ, ಸಂಸತ್ ಮೆಟ್ಟಿಲುಗಳ ಮೇಲೆ ಕುಳಿತು ಮಿಮಿಕ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಣ್ಣು ಹೊಡೆಯುವಂತಹ ವರ್ತನೆ ತೋರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾನಸಿಕವಾಗಿ ಸ್ವಸ್ಥರಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿರಲು ಸಮರ್ಥ ವಿರೋಧಪಕ್ಷ ಅಗತ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಆದರೆ, ದೇಶದಲ್ಲಿ ಜವಾಬ್ದಾರಿಯುತ ವಿರೋಧಪಕ್ಷದ ಕೊರತೆ ಎದ್ದು ಕಾಣುತ್ತಿದೆ. ಸಂಸತ್ ಅಧಿವೇಶನದಲ್ಲಿ ಮಹತ್ವದ ವಿಷಯಗಳ ಚರ್ಚೆ ನಡೆಯುವಾಗ ವಿರೋಧಪಕ್ಷದ ನಾಯಕರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಸಂಸತ್‌ನಲ್ಲಿ ಚರ್ಚಿಸಬೇಕಾದ ವಿಚಾರಗಳನ್ನು ಬೀದಿ ಹೋರಾಟಗಳ ಮೂಲಕ ಪ್ರಸ್ತಾಪಿಸಿದರೆ ಪರಿಹಾರ ಸಿಗುವುದಿಲ್ಲ. ಕಾಂಗ್ರೆಸ್ ಜವಾಬ್ದಾರಿ ವಹಿಸಿಕೊಂಡ ಬಳಿಕ ರಾಹುಲ್ ಗಾಂಧಿ ಸುಮಾರು 100 ಚುನಾವಣೆಗಳಲ್ಲಿ ಸೋತಿದ್ದಾರೆ. ಸೋಲಿನ ಹತಾಶೆಯಿಂದಲೇ ಸಂಸತ್‌ಗೆ ಗೈರಾಗಿ ಮಾಕ್ ಪಾರ್ಲಿಮೆಂಟ್ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೂ ತಿರುಗೇಟು ನೀಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹಿಂದೆಯೂ ಹಲವು ಬಾರಿ ನಡೆದಿದ್ದು, ಬಹುತೇಕ ಕಾಂಗ್ರೆಸ್ ಆಡಳಿತಾವಧಿಯಲ್ಲೇ ನಡೆದಿದೆ. ಚುನಾವಣೆಯಲ್ಲಿ ಸೋತಾಗ ಇವಿಎಂ, ಮತದಾರರ ಪಟ್ಟಿ ಹಾಗೂ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಕಾಂಗ್ರೆಸ್‌ನ ಚಾಳಿಯಾಗಿದೆ ಎಂದರು.

2014, 2019 ಮತ್ತು 2024ರ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಎಸ್‌ಐಆರ್ ಇರಲಿಲ್ಲ. ಚುನಾವಣಾ ಆಯೋಗದ ವಿರುದ್ಧದ ಆರೋಪಗಳಲ್ಲಿ ಸತ್ಯವಿದ್ದರೆ ಕರ್ನಾಟಕದ ಡಿ.ಕೆ. ಶಿವಕುಮಾರ, ತೆಲಂಗಾಣದ ರೇವಂತ ರೆಡ್ಡಿ ಹಾಗೂ ಕೇರಳದ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿ ಮರುಚುನಾವಣೆಗೆ ಸಿದ್ಧರಾಗಲಿ ಎಂದು ಸವಾಲು ಹಾಕಿದರು. ಪ್ರಧಾನಿ ಮೋದಿ ಅಧಿಕಾರದಲ್ಲಿರುವ ವರೆಗೆ ಅಕ್ರಮ ವಲಸಿಗರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

ಮತಗಳ್ಳತನದ ಆರೋಪಕ್ಕೆ ಪ್ರತ್ಯಾರೋಪ:

ಇತ್ತೀಚೆಗೆ ನಡೆದ ವಿಪ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಎಂಬುವವರು ಆಶಾ ಪಾಟೀಲ ಹೆಸರಿನಲ್ಲಿ ನಕಲಿ ಮತದಾನ ಮಾಡಿದ್ದಾರೆಂಬ ಆರೋಪದ ವಿಡಿಯೋ ಉಲ್ಲೇಖಿಸಿದ ತೇಜಸ್ವಿ ಸೂರ್ಯ, ಮತಗಳ್ಳತನದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಮೊದಲು ತಮ್ಮ ಪಕ್ಷದ ಇಂತಹ ಕೃತ್ಯಗಳಿಗೆ ಉತ್ತರಿಸಲಿ ಎಂದು ಟೀಕಿಸಿದರು.

ವಿಕಸಿತ ಭಾರತ ಅಭಿಯಾನದ ಸಹ ಸಂಚಾಲಕ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ವಿದೇಶಿ ವೇದಿಕೆಗಳಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿದೆ. ಈ ಕುರಿತು ಸತ್ಯಾಂಶಗಳನ್ನು ಯುವಜನರಿಗೆ ತಿಳಿಸುವುದೇ ಸಂವಾದದ ಉದ್ದೇಶ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಲಿಂಗರಾಜ ಪಾಟೀಲ, ಶಂಕರಣ್ಣ ಮುನವಳ್ಳಿ, ಬಿಜೆಪಿ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಡಾ. ಸಚಿನ್ ಬಿ.ಎಸ್, ಡಾ. ಸಂಜಯ ಕೊಟಬಾಗಿ ಸೇರಿದಂತೆ ಹಲವರಿದ್ದರು.

ಯುವ ಸಂವಾದ

ವಿಕಸಿತ ಭಾರತದ ಪರಿಕಲ್ಪನೆ, ಆತ್ಮನಿರ್ಭರ ಭಾರತದಿಂದ ಯುವಕರಿಗಾಗುವ ಪ್ರಯೋಜನ, ಉದ್ಯೋಗಾವಕಾಶ, ಎಸ್‌ಐಆರ್ ಪ್ರಕ್ರಿಯೆಯ ಗೊಂದಲ ಹಾಗೂ ಒಂದು ಸಮುದಾಯವನ್ನು ಗುರಿಯಾಗಿಸಿ ಮತದಾರರ ಹೆಸರು ಕೈಬಿಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಯುವಕರು ಪ್ರಶ್ನಿಸಿದರು. ತೇಜಸ್ವಿ ಸೂರ್ಯ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.