ಅಡಕೆ ಕ್ಯಾನ್ಸರ್‌ ಕಾರಕ ಎಂಬ ಆತಂಕ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಯತ್ನ : ಶಾಸಕ ಆರಗ ಜ್ಞಾನೇಂದ್ರ

| Published : Jul 21 2024, 01:27 AM IST / Updated: Jul 21 2024, 12:08 PM IST

ಅಡಕೆ ಕ್ಯಾನ್ಸರ್‌ ಕಾರಕ ಎಂಬ ಆತಂಕ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಯತ್ನ : ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಯುಪಿಎ ಸರ್ಕಾರದ ಅವಧಿಯಲ್ಲಿ ಸುಪ್ರೀಕೋರ್ಟಿಗೆ ನೀಡಲಾಗಿದ್ದ ಅಡಕೆ ಕ್ಯಾನ್ಸರ್‌ಕಾರಕವೆಂಬ ಅಫಿಡವಿಟ್‍ನಿಂದಾಗಿ ಎದುರಾಗಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪ್ರಯತ್ನ ನಡೆದಿದೆ ಎಂದು ಶಾಸಕ ಜ್ಞಾನೇಂದ್ರ ಹೇಳಿದರು.

 ತೀರ್ಥಹಳ್ಳಿ :  ಸುಪ್ರೀಂ ಕೋರ್ಟಿನಲ್ಲಿ ಅಡಕೆ ಮೇಲಿರುವ ಕ್ಯಾನ್ಸರ್‌ಕಾರಕ ಆರೋಪವನ್ನು ತೊಡೆದು ಹಾಕುವ ಸಲುವಾಗಿ ಅಡಕೆ ಸಂಶೋಧನೆ ನಡೆಸಿ ವರದಿ ನೀಡುವಂತೆ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಿಗೆ ಆದೇಶ ನೀಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಹೇಮಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 13 ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಸುಪ್ರೀಕೋರ್ಟಿಗೆ ನೀಡಲಾಗಿದ್ದ ಅಫಿಡವಿಟ್‍ನಿಂದಾಗಿ ಎದುರಾಗಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಅಡಕೆ ಬೆಳೆಗಾರರ ರಕ್ಷಣೆಗೆ ಕ್ಯಾಂಪ್ಕೋ ಮತ್ತು ಮ್ಯಾಮ್ಕೋಸ್ ಸಂಸ್ಥೆಗಳೊಂದಿಗೆ ನಾವುಗಳು ಕೂಡ ರಕ್ಷಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಸ್ಥಿರತೆಗಾಗಿ ಮ್ಯಾನ್ಮಾರ್‌ನಿಂದ ತಲೆ ಹೊರೆಯ ಮೇಲೆ ದೇಶದೊಳಗೆ ಬರುತ್ತಿರುವ ಅಡಕೆ ಸೇರಿದಂತೆ ಹೊರಗಿನಿಂದ ಬರುವ ಆಮದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ. ವಿಶೇಷವಾಗಿ ನಮ್ಮ ತಾಲೂಕಿನ ಅಡಕೆ ಉತ್ಕøಷ್ಟವಾಗಿದ್ದು ಇದರ ಘನತೆಗೆ ಧಕ್ಕೆ ಯುಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ನಮಗೆ ಬದುಕು ಕೊಟ್ಟ ಬೆಳೆಯ ಪರಂಪರೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಪಟ್ಟಣದ ಹೃದಯ ಭಾಗದಲ್ಲಿ ಬೃಹತ್ ಕಟ್ಟಡ ಸಂಕೀರ್ಣವನ್ನು ಹೊಂದುವ ಮೂಲಕ ಅಡಕೆ ಬೆಳೆಗಾರರ ನೆರವಿಗೆ ನಿಂತಿರುವ ಹೇಮಾದ್ರಿ ಸೌಹಾರ್ದ ಸಹಕಾರಿಯ ಕಾರ್ಯ ಮಾದರಿಯಾಗಿದೆ. 2023-24 ನೇ ಸಾಲಿನಲ್ಲಿ 9 ಲಕ್ಷ ರೂ ನಿವ್ವಳ ಗಳಿಸುವ ಮೂಲಕ ಆಸ್ತಿಯ ಜೊತೆಗೆ ಲಾಭ ಗಳಿಸುವ ಮೂಲಕ ಷೇರುದಾರರ ನಂಬಿಕೆಗೂ ಪಾತ್ರ ವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಎಚ್.ಎಂ.ಮಹಾಬಲ ಭಟ್ ಮಾತನಾಡಿ,ಸಂಸ್ಥೆಯಲ್ಲಿ 1505 ಷೇರುದಾರರಿಂದ 89.60 ಲಕ್ಷ ಷೇರು ಬಂಡವಾಳ ಹೊಂದಲಾಗಿದೆ. 2023-24 ನೇ ಸಾಲಿನಲ್ಲಿ ನಿತ್ಯನಿಧಿ ಠೇವಣಿ, ಖಾಯಂ ಠೇವಣಿ ಮತ್ತು ಉಳಿತಾಯ ಖಾತೆ ಸೇರಿ 1,20,95,657 ರೂ ಠೇವಣಿ ಇದೆ. 2.36 ಕೋಟಿ ಜಾಮೀನು ಸಾಲ,13.50 ಲಕ್ಷ ಪಿಗ್ಮಿ ಮೇಲಿನ ಸಾಲ 6.81 ಲಕ್ಷ ಠೇವಣಿ ಆಧಾರಿತ ಸಾಲ ಮತ್ತು 57.84 ಲಕ್ಷ ಅಡಕೆ ಸಂಸ್ಕರಣೆ ಸಾಲ ನೀಡಲಾಗಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಕಲ್ಲೋಣಿ ನಾರಾಯಣ ಭಟ್, ನಿರ್ದೆಶಕರುಗಳಾದ ನಾಗರಾಜ್ ದೇಮ್ಲಾಪುರ, ವೆಂಕಟೇಶ ಪಟವರ್ಧನ್, ಸತ್ಯನಾರಾಯಣ, ಜಗದೀಶ್, ಎ.ಆರ್.ಅರುಣ್, ಬಿ.ವಿ.ಶಂಕರ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾ ಮುಂತಾದವರು ಇದ್ದರು.