ಹೊನ್ನಾವರ ತಾಲೂಕಿನ ಮಂಕಿ ಹೋಬಳಿಯ ಕೊಕ್ಕೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪ್ರಜಾ ಸೇವೆ' ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷ ಮಂಕಾಳ ವೈದ್ಯ ಉದ್ಘಾಟಿಸಿದರು.

ಹೊನ್ನಾವರ: ತಾಲೂಕಿನ ಮಂಕಿ ಹೋಬಳಿಯ ಕೊಕ್ಕೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ''''ಪ್ರಜಾ ಸೇವೆ'''' ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷ ಮಂಕಾಳ ವೈದ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಜನರ ಬಳಿಗೆ ಆಡಳಿತ ಮತ್ತು ಜನಪ್ರತಿನಿಧಿಗಳನ್ನು ಕೊಂಡೊಯ್ಯುವ ಮೂಲಕ ಸಾರ್ವಜನಿಕರ ಕುಂದು-ಕೊರತೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ಸದುದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿ ಶನಿವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಜತೆ ಇರಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರಿದ್ದಲ್ಲಿಗೆ ಅಧಿಕಾರಿಗಳೇ ತೆರಳಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು ಎಂದರು. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ನೇರವಾಗಿ ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗೆ ತಲುಪಲಿದ್ದು, ಅರ್ಜಿದಾರರ ಮನೆಗೇ ಅಧಿಕೃತ ಕಾಗದಪತ್ರ ಬರಲಿದೆ. ಇದು ಯಾವುದೇ ಕಾರಣಕ್ಕೂ ಕಾಟಾಚಾರದ ಕಾರ್ಯಕ್ರಮವಲ್ಲ, ಬದಲಾಗಿ ಬಡವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಎಂದರು.

ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಇಲಾಖೆಗಳಿಗೆ ಸಂಬಂಧಿಸಿದ ಉಳಿದ ಎಲ್ಲ ಸಮಸ್ಯೆಗಳನ್ನು ಈ ವೇದಿಕೆಯಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು.

ಚಿತ್ತಾರ ರಸ್ತೆಯ ಸಮೀಪ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸರ್ಕಾರಿ ಜಾಗದಲ್ಲಿ ವಾಸವಿರುವ ಅರ್ಹರಿಗೆ 3 ಗುಂಟೆ ಜಾಗವನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಗಿದೆ. ಮಂಕಿ ಭಾಗದಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ₹105 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಮಂಕಿ ಆಸ್ಪತ್ರೆಯಲ್ಲಿ 24 ಗಂಟೆಯೂ ವೈದ್ಯರು ಲಭ್ಯವಿರುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಒಟ್ಟು 380 ಅರ್ಜಿಗಳು ಸಲ್ಲಿಕೆಯಾಗಿದ್ದು, ಸದ್ಯ ಎಲ್ಲ ಅರ್ಜಿಗಳು ಬಾಕಿ ಇವೆ. ಸಭೆಯಲ್ಲಿ ಯಾವುದೇ ಅರ್ಜಿಗಳ ವಿಲೇವಾರಿ ಆಗಿಲ್ಲ.

ತಾಲೂಕು ದಂಡಾಧಿಕಾರಿ ಪ್ರವೀಣ ಕರಾಂಡೆ ಸ್ವಾಗತಿಸಿದರು. ಭಟ್ಕಳ ಸಹಾಯಕ ಆಯುಕ್ತ ಜೆ. ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ, ಡಿವೈಎಸ್ಪಿ ರಾನು ಗುಪ್ತಾ, ಮಂಕಿ ಪಪಂ ಅಧ್ಯಕ್ಷೆ ಸವಿತಾ ನಾಯ್ಕ, ಉಪಾಧ್ಯಕ್ಷೆ ಜ್ಯೋತಿ ಖಾರ್ವಿ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಶಿವರಾಮ ಸಂಗುಮನೆ ಉಪಸ್ಥಿತರಿದ್ದರು.