ದೇಶ, ಸನಾತನ ಧರ್ಮ ರಕ್ಷಣೆ ಮಾಡುವ ಚುನಾವಣೆ: ಯತ್ನಾಳ

| Published : Apr 13 2024, 01:07 AM IST

ದೇಶ, ಸನಾತನ ಧರ್ಮ ರಕ್ಷಣೆ ಮಾಡುವ ಚುನಾವಣೆ: ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ಸಿನವರು ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಏನು ಮಾಡಿಲ್ಲ ಹೇಳಿ. ೫೦ ವರ್ಷದಿಂದ ನೀವು ಏನು ಮಾಡಿದ್ದೀರಿ? ೧೦ ವರ್ಷದಲ್ಲಿ ನರೇಂದ್ರ ಮೋದಿ ದೊಡ್ಡ ಕ್ರಾಂತಿಯನ್ನು ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಯತ್ನಾಳ ತಿಳಿಸಿದರು.

ಕಾರವಾರ: ಈ ಚುನಾವಣೆ ವಿಶ್ವೇಶ್ವರ ಹೆಗಡೆ, ನರೇಂದ್ರ ಮೋದಿ ಚುನಾವಣೆಯಲ್ಲ. ನಮ್ಮ ದೇಶ ಹಾಗೂ ಸನಾತನ ಧರ್ಮ ರಕ್ಷಣೆ ಮಾಡುವ ಚುನಾವಣೆಯಾಗಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ತಿಳಿಸಿದರು.

ನಗರದಲ್ಲಿ ಶುಕ್ರವಾರ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನವರು ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಏನು ಮಾಡಿಲ್ಲ ಹೇಳಿ. ೫೦ ವರ್ಷದಿಂದ ನೀವು ಏನು ಮಾಡಿದ್ದೀರಿ? ೧೦ ವರ್ಷದಲ್ಲಿ ನರೇಂದ್ರ ಮೋದಿ ದೊಡ್ಡ ಕ್ರಾಂತಿಯನ್ನು ಮಾಡಿದ್ದಾರೆ. ದೇಶದ ರಕ್ಷಣೆಗೆ ಮೋದಿ ಬೇಕು. ಕಾಂಗ್ರೆಸ್ ಅವಧಿಯಲ್ಲಿ ₹೧೦೦ ದೆಹಲಿಯಿಂದ ಜನರಿಗೆ ಬಿಡುಗಡೆಯಾಗಿದ್ದರೆ ರೈತನಿಗೆ ತಲುಪುವಾಗ ಎಷ್ಟು ಉಳಿಯುತ್ತಿತ್ತು. ಈಗ ₹೧೦೦ಕ್ಕೆ ₹100 ಜನರಿಗೆ ತಲುಪುತ್ತಿದೆ ಎಂದರು.

ಅಭ್ಯರ್ಥಿ ಯಾರಿದ್ದಾರೆ ಎಂದು ತಲೆಕೆಡಿಸಿಕೊಳ್ಳಬೇಡಿ. ಆ ಹೆಗಡೆ ಇಲ್ಲ, ಈ ಹೆಗಡೆ ಇದ್ದಾರೆ. ಒಟ್ಟಾರೆ ಹೆಗಡೆ ಇದ್ದಾರಲ್ಲ. ಹಿಂದೂ ಧರ್ಮ ಉಳಿಯಬೇಕಾದರೆ ನರೇಂದ್ರ ಮೋದಿ ಬೇಕಿದೆ. ನನ್ನ ಧರ್ಮ, ನನ್ನ ದೇಶದ ರಕ್ಷಣೆಗೆ ಮೋದಿಯಂತಹ ನಾಯಕತ್ವ ಅವಶ್ಯಕತೆಯಿದೆ ಎಂದ ಅವರು, ಅಪ್ಪ ಒಂದು ಪಾರ್ಟಿ, ಮಗ ಒಂದು ಪಾರ್ಟಿ. ಹೋಗುವುದಿದ್ದರೆ ಎಲ್ಲರೂ ಕೂಡಿ ಹೋಗಬೇಕು. ಎಂಎಲ್‌ಎ ಉಳಿಯಬೇಕು. ಮಗ ಕಾಂಗ್ರೆಸ್ ಸೇರ್ಪಡೆಯಾಗಬೇಕು. ಶಿವರಾಮ ಹೆಬ್ಬಾರ ನಾವು ಸ್ನೇಹಿತರು. ನಾನು ವಿಜಯಪುರದಲ್ಲಿ, ಅವರು ಉತ್ತರ ಕನ್ನಡದಲ್ಲಿ ಜಿಲ್ಲಾಧ್ಯಕ್ಷರಿದ್ದರು. ಅವರಿಗೆ ಕೇಳುತ್ತೇನೆ ನರೇಂದ್ರ ಮೋದಿ ಬರಲಿಲ್ಲ ಎಂದರೆ ದೇಶ ಏನಾಗುತ್ತದೆ ಎಂದು ಪ್ರಶ್ನಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಮಾತನಾಡಿ, ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳ ಬಿಜೆಪಿ, ಮಿತ್ರ ಪಕ್ಷದ್ದಾಗಬೇಕು. ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ. ಜನರಿಗೆಗಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ಅಭಿವೃದ್ಧಿ ಆಗಬೇಕಾದರೆ ಕಮಲವನ್ನು ಆಯ್ಕೆ ಮಾಡಬೇಕು. ದೇಶಕ್ಕಾಗಿ ಎನ್‌ಡಿಎ ಪಕ್ಷವನ್ನು ಬಹುಮತದಿಂದ ತರಬೇಕು. ದಾಖಲೆಯ ಗೆಲುವನ್ನು ನೀಡಬೇಕು ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಉತ್ತರ ಕನ್ನಡ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ ಕೊಡುವ ಮೂಲಕ ಮೋದಿಗೆ ಉಡುಗೋರೆ ನೀಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ಮೋದಿ ಎಂದೂ ಸ್ವಾರ್ಥ ಮಾಡಿಲ್ಲ. ದೇಶ ಜನಕ್ಕೆ ಆದ್ಯತೆ ನೀಡಿದ್ದಾರೆ. ದೇಶದ ಮೂಲೆ ಮೂಲೆ ಆಭಿವೃದ್ಧಿ ಆಗಿದೆ ಎಂದರು.

ಶಾಸಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಕಾರ್ಕಳ ಮಾತನಾಡಿ, ಮುಂದಿನ ೨೦ ದಿನ ನಿಮ್ಮ ಓಡಾಟದಿಂದ ಇಂದಿನ ನಾಮಪತ್ರ ವಿಜಯದ ಪತ್ರವಾಗಬೇಕು. ಸುರಕ್ಷಿತ, ಸಾಂಸ್ಕೃತಿಕ, ವಿಕಸಿತ ಭಾರತಕ್ಕೆ ನರೇಂದ್ರ ಮೋದಿ ಬೇಕು. ಮೋದಿ ಶಕ್ತಿ ಹೆಚ್ಚಿಲು ಕಾಗೇರಿ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜವಾಬ್ದಾರಿಯಿಂದ ನಿಮ್ಮ ಬೂತನ್ನು ನೋಡಿಕೊಳ್ಳಬೇಕು. ಮೇರಾ ಬೂತ್ ಸಬ್‌ಸೇ ಮಜಬೂತ್ ಮಾಡಿ ತೋರಿಸಬೇಕು. ಮನೆ ಮನೆಗೆ ಮೋದಿ ಪರಿವಾರ ಯೋಜನೆ ತಿಳಿಸಬೇಕು. ಉಜ್ವಲಾ, ಆಯುಷ್ಮಾನ ಭಾರತ, ಕಿಸಾನ ಸಮ್ಮಾನ, ಜೆಜೆಎಂನಂತಹ ಹಲವು ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಶತ ಶತಮಾನದ ಕನಸಾಗಿದ್ದ ರಾಮಮಂದಿರ ನಿರ್ಮಾಣವಾಗಿದೆ. ೧೦ ವರ್ಷದಲ್ಲಿ ೩೭೦ಕ್ಕಿಂತ ಹೆಚ್ಚಿನ ಯೋಜನೆ ಕೇಂದ್ರ ಜನರಿಗೆ ನೀಡಿದೆ. ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಮೋದಿ ಕಾರಣರಾಗಿದ್ದಾರೆ. ಭಯೋತ್ಪಾದಕತೆ ಇಲ್ಲದಂತೆ ಮಾಡಿದವರು ಮೋದಿಯಾಗಿದ್ದಾರೆ. ಎಲ್ಲರೂ ಸಂಕಲ್ಪಿತರಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದರು.

ಮೆರವಣಿಗೆ: ನಾಮಪತ್ರ ಸಲ್ಲಿಕೆಗೂ ಪೂರ್ವ ನಗರದ ದೈವಜ್ಞ ಸಭಾಂಗಣದಿಂದ ಅಂಬೇಡ್ಕರ ಸರ್ಕಲ್‌ವರೆಗೆ ಮೆರವಣಿಗೆ ನಡೆಸಲಾಯಿತು. ೩ ಸಾವಿರಕ್ಕೂ ಅಧಿಕ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೋದಿ ಮುಖವಾಡ ಧರಿಸಿದ್ದರು. ಡಿಜೆ ಅಬ್ಬರ ಕೂಡಾ ಜೋರಾಗಿತ್ತು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಕುಮಟಾ ಶಾಸಕ ದಿನಕರ ಶೆಟ್ಟಿ, ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಮಾಜಿ ಸಚಿವ ಆನಂದ ಅಸ್ನೋಟಿಕರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜಿಡಿಎಸ್ ಮುಖಂಡರಾದ ಸೂರಜ ನಾಯ್ಕ ಸೋನಿ, ಉಪೇಂದ್ರ ಪೈ ಮುಂತಾದವರು ಇದ್ದರು.