ಸಾರಾಂಶ
ದೇವರಾಜು ಕಪ್ಪಸೋಗೆ
ರಂಗೂಪುರ ಶಿವಕುಮಾರ್ಕನ್ನಡಪ್ರಭ ವಾರ್ತೆ ಚಾಮರಾಜನಗರ-ಗುಂಡ್ಲುಪೇಟೆ
ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆಯಿಂದ ಮೈಸೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ ಷಟಲ್ ಬಸ್‌ನಂತೆ ಹೆದ್ದಾರಿಯಲ್ಲಿ ಸಿಗುವ ಬಹುತೇಕ ಎಲ್ಲ ಹಳ್ಳಿಗಳ ಗೇಟ್ ಬಳಿ ನಿಲ್ಲುತ್ತಿದೆ. ಇದೇನು ಎಕ್ಸ್‌ಪ್ರೆಸ್ ಬಸ್ಸಾ, ಷಟಲ್ ಬಸ್ಸಾ ಎಂಬ ಪ್ರಶ್ನೆ ಎದ್ದಿದೆ.!ಕೆಲ ವರ್ಷದ ಹಿಂದಿನ ತನಕ ಚಾಮರಾಜನಗರದಿಂದ ನಂಜನಗೂಡು ಮಾರ್ಗವಾಗಿ ಹೊರಡುವ ಬಸ್ ಚಾಮರಾಜನಗರದಿಂದ ಹೊರಟು ಕೌಲಂದೆ, ನಂಜನಗೂಡು ಬಿಟ್ಟು ಎಲ್ಲೂ ನಿಲ್ಲಿಸುತ್ತಿರಲಿಲ್ಲ. ಇದೀಗ ಮರಿಯಾಲ, ಬದನಗುಪ್ಪೆ, ಪಣ್ಯದಹುಂಡಿ, ಹೆಗ್ಗವಾಡಿ ಕ್ರಾಸ್, ಕೌಲಂದೆ, ಚಿನ್ನದಗುಡಿ ಹುಂಡಿಯಲ್ಲೂ ಕೆಲ ಎಕ್ಸ್‌ಪ್ರೆಸ್ ಬಸ್‌ಗಳು ನಿಲ್ಲುತ್ತವೆ.
ಇನ್ನೂ ಚಾಮರಾಜನಗರದಿಂದ ನರಸೀಪುರ ಮಾರ್ಗವಾಗಿ ಹೊರಡುವ ಬಸ್ ಚಾಮರಾಜನಗರದಿಂದ ಹೊರಟು ಸಂತೇಮರಹಳ್ಳಿ, ಮೂಗೂರು ಮತ್ತು ನರಸೀಪುರದಲ್ಲಿ ಮಾತ್ರ ನಿಲ್ಲುತ್ತಿದ್ದವು. ಇದೀಗ ಚಾಮರಾಜನಗರದಿಂದ ಹೊರಟು ಮಾದಾಪುರ, ಮಂಗಲ, ಸಂತೇಮರಹಳ್ಳಿ, ಬಾಗಳಿ ಗೇಟ್, ಮೂಗೂರು, ಕುರುಬೂರು, ಗರ್ಗೇಶ್ವರಿ, ಕೆಂಪಯ್ಯನಹುಂಡಿ, ಮೇಗಳಾಪುರ, ಚಿಕ್ಕಹಳ್ಳಿ ಸೇರಿದಂತೆ ಹಲವಡೆ ನಿಲ್ಲಿಸಲಾಗುತ್ತಿದೆ.ಇಲ್ಲೂ ಅದೇ ಕಥೆ:
ಗುಂಡ್ಲುಪೇಟೆಯಿಂದ ಹೊರಡುವ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ ಗುಂಡ್ಲುಪೇಟೆ ಬಿಟ್ಟರೆ ಗರಗನಹಳ್ಳಿ, ಬೇಗೂರು, ಹಿರೀಕಾಟಿ ಬಿಟ್ಟರೆ ನಂಜನಗೂಡು, ಕಡಕೊಳ ಬಿಟ್ಟರೆ ಮೈಸೂರು ತನಕ ಎಲ್ಲೂ ಸ್ಟಾಪ್ ಇರಲಿಲ್ಲ. ಆದರೀಗ ಗುಂಡ್ಲುಪೇಟೆ ಬಿಟ್ರೆ ಮಾಡ್ರಹಳ್ಳಿ, ಗರಗನಹಳ್ಳಿ, ರಾಘವಾಪುರ, ಬೇಗೂರು ಬಳಿಯ ಐಟಿಐ, ಬೇಗೂರು, ಹೆಡಿಯಾಲ ಕ್ರಾಸ್, ತೊಂಡವಾಡಿ, ಹಿರೀಕಾಟಿ, ಎಲಚಗೆರೆ, ಸಿಂಧುವಳ್ಳಿಪುರ, ಮುದ್ದಹಳ್ಳಿ, ಕಳಲೆ, ದೇವಿರಮ್ಮನಹಳ್ಳಿ ನಂಜನಗೂಡು ಸ್ಟಾಪ್ ಕೊಡುತ್ತಿದೆ. ಗುಂಡ್ಲುಪೇಟೆ-ಮೈಸೂರಿಗೆ ಷಟಲ್ ಬಸ್‌ಗೆ ೭೩ ರುಪಾಯಿ. ಎಕ್ಸ್‌ಪ್ರೆಸ್ ಬಸ್‌ಗೆ ೮೨ ರುಪಾಯಿ, ನಾನ್ ಸ್ಟಾಪ್ ಬಸ್‌ಗೆ ೮೫ ರುಪಾಯಿ ಕೆಎಸ್‌ಆರ್‌ಟಿಸಿ ನಿಗದಿ ಪಡಿಸಿದೆ. ಆದರೆ ಎಕ್ಸ್‌ಪ್ರೆಸ್ ಬಸ್ ೮೨ ರುಪಾಯಿ ಕೊಟ್ಟು ಷಟಲ್ ಬಸ್ ರೀತಿ ಸಂಚರಿಸುವಂತೆ ಆಗುತ್ತಿದೆ.ಕೆಎಸ್‌ಆರ್‌ಟಿಸಿ ಷಟಲ್ ಬಸ್ ದರವನ್ನೇ ಎಕ್ಸ್‌ಪ್ರೆಸ್‌ಗೂ ಪಡೆಯಲಿ. ಅದು ಬಿಟ್ಟು ಷಟಲ್ ಬಸ್ ರೀತಿ ಕೈ ತೋರಿದಲ್ಲಿ ನಿಲ್ಲುತ್ತ ಸಾಗುವ ಎಕ್ಸ್‌ಪ್ರೆಸ್ ಬಸ್‌ಗೇಕೆ ಎಕ್ಸ್‌ಪ್ರೆಸ್ ನಿಗದಿ ಪಡಿಸಿದ ಹಣ ಕೊಡಬೇಕು ಎಂಬ ಪ್ರಶ್ನೆಯನ್ನು ಪ್ರಯಾಣಿಕರು ಎತ್ತಿದ್ದಾರೆ.
ತಕರಾರೇನಿಲ್ಲ: ಚಾಮರಾಜನಗರ- ಮೈಸೂರು ಮತ್ತು ಗುಂಡ್ಲುಪೇಟೆ-ಮೈಸೂರು ತನಕ ಎಲ್ಲಾ ಹಳ್ಳಿಗಳ ಗೇಟ್‌ನಲ್ಲಿ ಬಸ್ ನಿಲ್ಲಿಸಲಿ ಅದಕ್ಕೇನು ಪ್ರಯಾಣಿಕರ ತಕರಾರಿಲ್ಲ. ಆದರೆ, ಎಕ್ಸ್‌ಪ್ರೆಸ್ ಬಸ್‌ನ ದರ ಪಡೆದು ಷಟಲ್ ಬಸ್ ರೀತಿ ಸಂಚರಿಸಲು ಮಾತ್ರ ತಕರಾರು ಎಂದು ಪ್ರಯಾಣಿಕರ ಆಕ್ರೋಶದ ಮಾತಾಗಿದೆ.ಷಟಲ್ ಬಸ್ ಬಿಡಿ ಚಾಮರಾಜನಗರ- ಮೈಸೂರು, ಗುಂಡ್ಲುಪೇಟೆ-ಮೈಸೂರು ತನಕ ಹೆದ್ದಾರಿ ಎರಡು ಬದಿ ಸಿಗುವ ಹಳ್ಳಿಗಳ ಗೇಟ್‌ಗಳಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲ್ಲಿಸುವ ಬದಲು ಷಟಲ್ ಬಸ್ ಬಿಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಎಕ್ಸ್‌ಪ್ರೆಸ್ ಬಸ್‌ಗೆ ಹಣ ನೀಡಿ, ಷಟಲ್ ಬಸ್‌ನಂತಾಗಿರುವ ಎಕ್ಸ್‌ಪ್ರೆಸ್‌ನಲ್ಲಿ ಸಂಚರಿಸುವ ದರ್ದು ಆದಷ್ಟು ಬೇಗ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ತಪ್ಪಿಸಲಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಹಗಲು ದರೋಡೆ:ಷಟಲ್ ಬಸ್‌ನಂತಾಗಿರುವ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಹೆಚ್ಚಿನ ದರ ಪಡೆದು, ಪ್ರಯಾಣಿಕರಿಗೆ ಹಗಲು ದರೋಡೆ ಮಾಡುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಚಾಮರಾಜನಗರದಿಂದ ಮೈಸೂರಿಗೆ, ಮೈಸೂರಿನಿಂದ-ಚಾಮರಾಜನಗರಕ್ಕೆ ಮತ್ತು ಗುಂಡ್ಲುಪೇಟೆಯಿಂದ ಮೈಸೂರಿಗೆ, ಮೈಸೂರಿನಿಂದ ಗಂಡ್ಲುಪೇಟೆಗೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು ಕಂಡ ಕಂಡ ಕಡೆಯೆಲ್ಲ ನಿಲ್ಲಿಸುವ ಷಟಲ್ ಬಸ್‌ಗಳಾಗಿದ್ದು, ಪ್ರಯಾಣಿಕರಿಂದ ಎಕ್ಸ್‌ಪ್ರೆಸ್ ದರ ಪಡೆದು ಷಟಲ್ ಬಸ್ ಓಡಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಹಣದ ಜೊತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಬಸ್‌ಗಳು ಸಹ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ.ಸಿ. ಗಿರೀಶ್, ಚಾಮರಾಜನಗರ
ಅಶ್ವಮೇಧವೂ ಇಲ್ಲ, ನಾನ್ ಸ್ಟಾಪೂ ಇಲ್ಲ!ಮೈಸೂರಿನಿಂದ ನಂಜಗೂಡು ಮಾರ್ಗವಾಗಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಗೆ ಅಶ್ವಮೇಧ, ನಾನ್ ಸ್ಟಾಪ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ, ನರಸೀಪುರ ಮಾರ್ಗವಾಗಿ ಪವರ್ ಮಿನಿಸ್ಟರ್ ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ, ಸಂಸದ ಸುನೀಲ್ ಬೋಸ್ ನೆಚ್ಚಿನ ಕ್ಷೇತ್ರ ಟಿ.ನರಸೀಪುರ ಮಾರ್ಗವಾಗಿ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಅಶ್ವಮೇಧವೂ ಇಲ್ಲ, ನಾನ್ ಸ್ಟಾಪ್ ಬಸ್‌ಗಳು ಇಲ್ಲವಾಗಿದ್ದು, ಇರುವ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತಿಲ್ಲ. ಇವುಗಳ ಬಗ್ಗೆ ಸಂಸದರ ದೀಕ್ಷಾ ಸಭೆಯಲ್ಲಿ ಚರ್ಚೆಯಾಗಿದ್ದರೂ ಸಂಸದರೂ ಇದುವರಗೆ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಬಗ್ಗೆ ಕಾಳಜಿ ತೋರಿಸಿಲ್ಲ.
ಪ್ರಯಾಣಿಕರ ಹಿತದೃಷ್ಟಿ ಹಾಗೂ ಸಂಸ್ಥೆಗೆ ಆದಾಯ ಬರುತ್ತದೆ ಎಂದು ಮೈಸೂರು-ಗುಂಡ್ಲುಪೇಟೆ ನಡುವೆ ಎಕ್ಸ್ ಪ್ರೆಸ್ ಸಾರಿಗೆ ಬಸ್‌ಗಳು ಕೆಲವು ಗೇಟ್ ಗಳಲ್ಲಿ ಹೆಚ್ಚುವರಿ ಸ್ಟಾಪ್ ಕೊಡಲಾಗುತ್ತಿದೆ. ಅಶ್ವಮೇಧ, ನಾನ್ ಸ್ಟಾಪ್ ಬಸ್‌ಗಳಲ್ಲಿ ಪ್ರಯಾಣಿಕರು ತೆರಳಲಿದ್ದಾರೆ.- ತ್ಯಾಗರಾಜ್, ಘಟಕ ವ್ಯವಸ್ಥಾಪಕ