ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕ ಕೆಲಸ ನಿರ್ವಹಿಸಿದ ಖಟ್ಟೆ

| Published : Jul 12 2024, 01:31 AM IST

ಸಾರಾಂಶ

ಒಬ್ಬ ಸರ್ಕಾರಿ ನೌಕರನಾಗಿ, ಒಬ್ಬ ಶಾಸಕರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆ ಮಾಡಿರುವ ಖಟ್ಟೆ ಅವರ ಸೇವೆ ಶ್ಲಾಘನೀಯವಾದದ್ದು, ಅವರ ಸೇವೆ ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಒಬ್ಬ ಸರ್ಕಾರಿ ನೌಕರನಾಗಿ, ಒಬ್ಬ ಶಾಸಕರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆ ಮಾಡಿರುವ ಖಟ್ಟೆ ಅವರ ಸೇವೆ ಶ್ಲಾಘನೀಯವಾದದ್ದು, ಅವರ ಸೇವೆ ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಭೀಮಾಶಂಕರ ಸಹಕಾರಿ ಬ್ಯಾಂಕ್‌ನ ಸಭಾ ಭವನದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ, ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಎಸ್‌.ಖಟ್ಟೆ ನಿವೃತ್ತಿ ಹೊಂದಿದ ಪ್ರಯುಕ್ತ ಖಟ್ಟೆ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದ ಅವರು, ಮನುಷ್ಯನಿಗೆ ಭಯ, ಭಕ್ತಿ ಇರಬೇಕು. ಯಾರಲ್ಲಿ ಭಯ, ಭಕ್ತಿ, ನಂಬಿಕೆ ಇರುತ್ತದೆಯೋ ಅವರು ಸಾರ್ವಜನಿಕರ ಒಳಿತನ್ನು ಬಯಸುತ್ತಾರೆ. ಕರ್ತವ್ಯದ ದಿನದಲ್ಲಿ ಟಿ.ಎಸ್‌.ಖಟ್ಟೆ ಒಂದು ಕಪ್ಪುಚುಕ್ಕೆ ಇಲ್ಲದೇ ಸಾರ್ಥಕ ಸೇವೆ ಮಾಡಿದ್ದಾರೆ. ತಮ್ಮ ಜಾಣತನದಿಂದ ಕೆಲಸ ಕಾರ್ಯಗಳನ್ನು ಮಾಡಿ ಒಳ್ಳೆತನ ಬೆಳೆಸಿಕೊಳ್ಳುವುದರ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಮತಕ್ಷೇತ್ರದ ಸರ್ವಾಂಗೀಣ ಪ್ರಗತಿ ನನ್ನ ಒಬ್ಬನಿಂದಲೇ ಆಗಿರುವುದಿಲ್ಲ. ರಾಜ್ಯಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ನನ್ನ ಅಪ್ತ ಕಾರ್ಯದರ್ಶಿಗಳ ಪ್ರಾಮಾಣಿಕ ಪ್ರಯತ್ನ, ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಆಗಿದೆ. ಸರ್ಕಾರದಿಂದ ಪ್ರಯತ್ನ ಮಾಡಿ ಯೋಜನೆಗಳು ತರಬಹುದು, ಆದರೆ, ಪ್ರತಿ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೇ ಅದರಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.ಮತಕ್ಷೇತ್ರದ ಆನಾರೋಗ್ಯದಿಂದ ಬಳಲುತ್ತಿರುವ ಅನೇಕ ಜನರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆಗಾಗಿ ಸಾಕಷ್ಟು ಪತ್ರವ್ಯವಹಾರ ಮಾಡಿ ಸಾರ್ವಜನಿಕರಿಗೆ ಸಹಾಯ ಮಾಡಿಸಲು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಸರ್ಕಾರಿ ನೌಕರರಿಗೆ ನಿವೃತ್ತಿ ಸಹಜ. ಆದರೆ, ಶರೀರಕ್ಕೆ ನಿವೃತ್ತಿ ಇರುವುದಿಲ್ಲ. ಮತ್ತಷ್ಟು ಶಕ್ತಿ ಬಂದಂತಾಗಿದೆ. ನಿಮ್ಮ ಸಹಜ ಕೆಲಸ ಕಾರ್ಯಗಳು ಸದಾ ನಡೆಯಲಿ. ಭಗವಂತ ಆರೋಗ್ಯ, ಆಯುಸ್ಸು ಸದಾ ಕರುಣಿಸಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಆರ್‌.ಎಂ.ಶಹಾ ಪಬ್ಲಿಕ್‌ ಶಾಲೆಯ ಅಧ್ಯಕ್ಷ ಡಿ.ಆರ್‌.ಶಹಾ, ನ್ಯಾಯವಾದಿ ಸುನೀಲ ಕುಲಕರ್ಣಿ, ಮಹೇಶಗೌಡ ಬಿರಾದಾರ, ಲಚ್ಯಾಣ ಸಾಲೋಟಗಿ ಗ್ರಾಮದ ಮುಖಂಡ ಶಿವಯೋಗೆಪ್ಪ ಚನ್ನಗೊಂಡ, ಮಹೇಶ ಹೊನ್ನಬಿಂದಗಿ, ಜಾವೀದ್‌ ಮೋಮಿನ, ಆಪ್ತ ಕಾರ್ಯದರ್ಶಿಗಳಾದ ಬಿರಾದಾರ, ಶ್ರೀಕಾಂತ ಚವ್ಹಾಣ ಮೊದಲಾದವರು ಇದ್ದರು.