ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನೂತನ ಯೋಜನೆ: ಶಾಸಕ ಮಾನೆ

| Published : Feb 05 2024, 01:51 AM IST

ಸಾರಾಂಶ

ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು ನನ್ನ ಶಾಲೆ, ನನ್ನ ಜವಾಬ್ದಾರಿ ಎನ್ನುವ ವಿನೂತನ ಯೋಜನೆ ಜಾರಿಗೊಳಿಸುತ್ತಿದೆ.

ನನ್ನ ಶಾಲೆ, ನನ್ನ ಜವಾಬ್ದಾರಿ ಜಾರಿ । ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು ನನ್ನ ಶಾಲೆ, ನನ್ನ ಜವಾಬ್ದಾರಿ ಎನ್ನುವ ವಿನೂತನ ಯೋಜನೆ ಜಾರಿಗೊಳಿಸುತ್ತಿದೆ. ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಹಳೆಗೆಜ್ಜಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೆಲೆಸಿದ್ದು, ಉತ್ತಮ ಉದ್ಯೋಗಗಳಲ್ಲಿ ತೊಡಗಿದ್ದಾರೆ. ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಆಲೋಚನೆ ಅವರಲ್ಲಿದ್ದರೂ ಕೂಡ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದು ತಿಳಿದಿರುವುದಿಲ್ಲ. ಇಂಥ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಮನಗಂಡಿದೆ ಎಂದ ಅವರು, ಕಳೆದ ಎರಡು ವರ್ಷಗಳಲ್ಲಿ ಹಾನಗಲ್ ತಾಲೂಕಿನಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ಅನೇಕ ಶಾಲೆಗಳನ್ನು ಅಭಿವೃದ್ಧಿ ಪಡಿಸಿ, ಸೌಲಭ್ಯಗಳನ್ನೂ ಕಲ್ಪಿಸಿದ್ದೇವೆ. ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಗ್ರಹಿಸುವಷ್ಟು ಹಣವನ್ನೂ ತಾವೂ ಕೂಡ ವೈಯಕ್ತಿಕವಾಗಿ ನೀಡುತ್ತಿದ್ದು, ಇದುವರೆಗೂ ₹೧೫ ಲಕ್ಷ ಗಳಿಗಿಂತ ಹೆಚ್ಚು ಹಣದಲ್ಲಿ ಡೆಸ್ಕ್, ಗ್ರೀನ್ ಬೋರ್ಡ್, ಪೀಠೋಪಕರಣ, ಸುಣ್ಣಬಣ್ಣಕ್ಕೆ ವ್ಯಯ ಮಾಡಲಾಗಿದೆ ಎಂದು ತಿಳಿಸಿದರು.ಹಾನಗಲ್ ತಾಲೂಕಿನ ೬೫ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ೧೫ ಶಾಲೆಗಳು ಹಾಗೂ ಇನ್ನುಳಿದ ೫೦ ಶಾಲೆಗಳಿಗೆ ದಾನಿಗಳು ಹಾಗೂ ವೈಯಕ್ತಿಕ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುತ್ತಿದ್ದು, ಶೈಕ್ಷಣಿಕ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ ಎಂದರು.

ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗೆ ಆಸಕ್ತಿ ವಹಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೂ ಗಮನ ನೀಡಲಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಜೋಗೇರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಮಣ್ಣ ಪೂಜಾರ, ಹನುಮಂತಪ್ಪ ಹುರುಳಿಕುಪ್ಪಿ, ಮಂಜು ದೊಡ್ಡಮನಿ, ಜಯವಂತಪ್ಪ ಬೆಳಗಾಲ, ಲಲಿತಾ ಕುಳೇನೂರ, ಮಂಜುಳಾ ಹುರುಳಿಕುಪ್ಪಿ, ಅಣ್ಣಪ್ಪ ಸಣ್ಣಮನಿ, ದುರ್ಗಪ್ಪ ಪೂಜಾರ, ನೀಲಪ್ಪ ತಿಳವಳ್ಳಿ, ಮಾಲತೇಶ ಹಳೆಕೋಟಿ, ಜಗದೀಶ ಹಿರೇಕಣಗಿ ಸೇರಿದಂತೆ ಗ್ರಾಪಂ ಮತ್ತು ಎಸ್‌ಡಿಎಂಸಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.