ಈಗಾಗಲೇ ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳ ೧,೦೦೦ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಂದು ಲಕ್ಷ ಉಪಯುಕ್ತ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗಿದೆ. ಇದೀಗ ಹಾಸನ ಜಿಲ್ಲೆಯಲ್ಲಿಯೂ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಪುಸ್ತಕ ಸಂಸ್ಕೃತಿ ಬೆಳೆಸುವ ಈ ಕಾರ್ಯಕ್ಕೆ ದಾನಿಗಳ ಸಹಕಾರವೂ ದೊರೆಯುತ್ತಿದೆ ಎಂದು ಹೇಳಿದರು. ಆಯಾ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಆಯ್ಕೆ ಮಾಡಲಾದ ಪುಸ್ತಕಗಳನ್ನು ಶಾಲೆಗಳಿಗೆ ನೀಡಲಾಗುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಓದುವಂತೆ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪುಸ್ತಕಗಳು ಮಕ್ಕಳ ಕೈ ಸೇರಿ ಅವರ ಚಿಂತನಾ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸಬೇಕು ಎಂಬ ಆಶಯ ನಮ್ಮದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಜೊತೆಗೆ ಜ್ಞಾನ ಹಾಗೂ ಪುಸ್ತಕ ಸಂಸ್ಕೃತಿಯನ್ನು ವಿಸ್ತರಿಸುವ ಉದ್ದೇಶದಿಂದ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ನೂರು ಶಾಲೆಗಳಿಗೆ ನೂರು ಪುಸ್ತಕ’ ಯೋಜನೆಗೆ ಶನಿವಾರ ಚಾಲನೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸೆ. ೧೨ರ ಶನಿವಾರದಂದು ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಜಿಪಂ ಸಿಇಒ ಶುಭಂ ಶುಕ್ಲಾ, ಸಾಹಿತಿ ರೂಪಾ ಹಾಸನ, ಡಿಡಿಪಿಐ ಬಲರಾಂ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಯೋಜನೆಯಡಿ ಜಿಲ್ಲೆಯ ೧೦೦ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು. ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸುವುದು, ಜ್ಞಾನವನ್ನು ವೃದ್ಧಿಸುವುದು ಹಾಗೂ ಪುಸ್ತಕ ಪ್ರೀತಿಯನ್ನು ಬೆಳೆಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪಠ್ಯಪುಸ್ತಕಗಳ ಜತೆಗೆ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾದ ವಿವಿಧ ವಿಷಯಗಳ ಪುಸ್ತಕಗಳನ್ನು ಒದಗಿಸಲಾಗುತ್ತಿದೆ ಎಂದರು. ಈಗಾಗಲೇ ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳ ೧,೦೦೦ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಂದು ಲಕ್ಷ ಉಪಯುಕ್ತ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗಿದೆ. ಇದೀಗ ಹಾಸನ ಜಿಲ್ಲೆಯಲ್ಲಿಯೂ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಪುಸ್ತಕ ಸಂಸ್ಕೃತಿ ಬೆಳೆಸುವ ಈ ಕಾರ್ಯಕ್ಕೆ ದಾನಿಗಳ ಸಹಕಾರವೂ ದೊರೆಯುತ್ತಿದೆ ಎಂದು ಹೇಳಿದರು. ಆಯಾ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಆಯ್ಕೆ ಮಾಡಲಾದ ಪುಸ್ತಕಗಳನ್ನು ಶಾಲೆಗಳಿಗೆ ನೀಡಲಾಗುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಓದುವಂತೆ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪುಸ್ತಕಗಳು ಮಕ್ಕಳ ಕೈ ಸೇರಿ ಅವರ ಚಿಂತನಾ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸಬೇಕು ಎಂಬ ಆಶಯ ನಮ್ಮದು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಇದೊಂದು ಮಹತ್ವದ ಓದಿಸುವ ಯೋಜನೆ. ಲೇಖಕರು ರಚಿಸಿದ ಪುಸ್ತಕಗಳು ನೇರವಾಗಿ ಮಕ್ಕಳ ಕೈ ಸೇರುವಂತಾಗಿರುವುದು ಸಂತೋಷದ ಸಂಗತಿ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ಆರ್‌. ಬೊಮ್ಮೇಗೌಡ, ಪ್ರಕಾಶಕರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಕೀರ್ತಿ, ಜಂಟಿ ಕಾರ್ಯದರ್ಶಿ ಸುರೇಶ್ ಹಾಗೂ ನಿರ್ದೇಶಕರಾದ ವಿಜಯ, ರಘುವೀರ್ ಇತರರು ಉಪಸ್ಥಿತರಿದ್ದರು.