ನೌಕರರು ಸರ್ಕಾರಿ ಅಥವಾ ಅರೆ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಮೇಲೆ ಸಹಜವಾಗಿ ಬರುವ ಆರೋಗ್ಯ ಸಮಸ್ಯೆಗಳು, ಮತ್ತು ಕೌಟುಂಬಿಕ ಸಮಸ್ಯೆಗಳು ಅವರ ಮನಸ್ಸನ್ನು ಹಾಳು ಮಾಡುತ್ತವೆ. ಅಂತಹ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘ ನೌಕರರ ಆಸರೆಗೆ ಬರಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರದ ಉಪ ಆಧೀಕ್ಷಕರಾದ ದಿನಕರ್ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನೌಕರರು ಸರ್ಕಾರಿ ಅಥವಾ ಅರೆ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಮೇಲೆ ಸಹಜವಾಗಿ ಬರುವ ಆರೋಗ್ಯ ಸಮಸ್ಯೆಗಳು, ಮತ್ತು ಕೌಟುಂಬಿಕ ಸಮಸ್ಯೆಗಳು ಅವರ ಮನಸ್ಸನ್ನು ಹಾಳು ಮಾಡುತ್ತವೆ. ಅಂತಹ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘ ನೌಕರರ ಆಸರೆಗೆ ಬರಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರದ ಉಪ ಆಧೀಕ್ಷಕರಾದ ದಿನಕರ್ ಶೆಟ್ಟಿ ಹೇಳಿದರು.

ಕುಶಾಲನಗರದ ತಾಲೂಕು ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಮಹಾಸಭೆಯ ಅಧಿವೇಶನದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.

ನೌಕರರು ಸೇವೆಯಿಂದ ನಿವೃತ್ತರಾದ ನಂತರ ಸಹಜವಾಗಿ ಪರಸ್ಪರ ಅಪರಿಚಿತರಂತೆ ಇರುತ್ತಾರೆ. ನಿವೃತ್ತಿಯ ಅವಧಿಯಲ್ಲಿ ತಮ್ಮ ಮಾನಸಿಕ ನೋವುಗಳನ್ನು ಹಂಚಿಕೊಳ್ಳಲು ಒಬ್ಬರಿಗೆ ಮತ್ತೊಬ್ಬರು ಸಹಕಾರಿಯಾಗಲು ಸಂಘಟನೆಗಳ ಅವಶ್ಯಕತೆ ಇರುತ್ತವೆ. ನಿವೃತ್ತಿಯ ನಂತರ ಅನೇಕ ನೌಕರರು ತಮ್ಮ ವೈಯಕ್ತಿಕ ಜೀವನದಲ್ಲಿ ಕುಟುಂಬದ ಸದಸ್ಯರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ನಿದರ್ಶನಗಳು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ ಬಿ ಮಾದಮಯ್ಯ ಅವರು ಸರ್ಕಾರ ನಿವೃತ್ತ ನೌಕರರಿಗೆ ಕೊಡಮಾಡುವ ಸೌಲಭ್ಯಗಳು ಮತ್ತು ಪಿಂಚಣಿಯಲ್ಲಿ ಆಗುವ ವ್ಯತ್ಯಾಸಗಳನ್ನು ಪಡೆದುಕೊಳ್ಳುವ ಬಗೆ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.ಸಂಘದ ಸ್ಥಾಪಕ ಸದಸ್ಯ ಹಾಗೂ ಸಲಹೆಗಾರ, ನಿವೃತ್ತ ಮುಖ್ಯ ಶಿಕ್ಷಕ ಎಂ.ಎಚ್‌. ನಜೀರ್ ಅಹ್ಮದ್ ಉದ್ಘಾಟಿಸಿದರು.ಸಂಘದ 2025-26 ಮೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಮೊಣ್ಣಪ್ಪ ವಹಿಸಿದ್ದರು.

ಸಂಘದ ಸಲಹೆಗಾರರಾದ ಅಬ್ರಹಾಂ ದಿವಾಕರ್ ಸಂಘದ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಶಿವಾನಂದ, ಎಚ್. ಕೆ.ಪುಟ್ಟರಾಜು, ಲೋಕೇಶ್, ಕೆ. ಎನ್. ರಾಜಪ್ಪ ಮತ್ತು ವಿ. ಆರ್. ಹೆಗಡೆ ಅವರುಗಳು ಸುಮಾರು 51 ನೂತನ ಸದಸ್ಯರು ಸಂಘಕ್ಕೆಸೇರ್ಪಡೆ ವಿಚಾರ, ಸುಮಾರು 30ಕ್ಕೂ ಹೆಚ್ಚು ಸದಸ್ಯರು 3000 ಕ್ಕಿಂತ ಅಧಿಕ ಮೊತ್ತ ಕಟ್ಟಡ ನಿಧಿಗೆ ವಂತಿಗೆ ನೀಡಿರುವ ಮಾಹಿತಿ, ಮತ್ತು ಸಂಘದ 2025-26 ನೇ ಸಾಲಿನ ಲೆಕ್ಕಪತ್ರ ಮಂಡನೆ ಮತ್ತು ಲೆಕ್ಕ ಪರಿಶೋಧನಾ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.

ಮೃತ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 21 ನಿವೃತ್ತ ನೌಕರರನ್ನು ಗೌರವಿಸಲಾಯಿತು.ಹಿರಿಯ ಸದಸ್ಯರಾದ ಬಾಚರಣೆಯಂಡ ಅಪ್ಪಣ್ಣ, ನಿರ್ದೇಶಕರಾದ ಎಂ ಎಚ್ ಫಝುಲುಲ್ಲಾ, ಬಿ ಕೆ ಕಾಳಯ್ಯ, ಎಂ ಎಸ್ ಗಣೇಶ್, ಶಬ್ಬೀರ್ ಬಾಷಾ ಮತ್ತಿತರರು ಇದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಶಾಂತ ಲಕ್ಷ್ಮಿ, ಸಂಘದ ಖಜಾಂಜಿ ವಿ. ಆರ್. ಹೆಗಡೆ ಮತ್ತು ನಿರ್ದೇಶಕರಾದ ಎಂ. ಎಸ್. ಗಣೇಶ್ ನಿರ್ವಹಿಸಿದರು.