ಜಾನಪದ ಲೋಕಕ್ಕೆ ಬಿಡುಗಡೆ ಆಗದ ಅನುದಾನ
KannadaprabhaNewsNetwork | Published : Oct 16 2023, 01:45 AM IST
ಜಾನಪದ ಲೋಕಕ್ಕೆ ಬಿಡುಗಡೆ ಆಗದ ಅನುದಾನ
ಸಾರಾಂಶ
ರಾಮನಗರ: ಕರ್ನಾಟಕ ಜಾನಪದ ಪರಿಷತ್ ಗೆ ರಾಜ್ಯ ಸರ್ಕಾರ ಪ್ರತಿವರ್ಷ ನೀಡುವ 1 ಕೋಟಿ ಹಾಗೂ ಬಜೆಟ್ ನಲ್ಲಿ ಘೋಷಿಸಿರುವ 2 ಕೋಟಿ ವಿಶೇಷ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಜಾನಪದ ಲೋಕದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಹಾಗೂ ಕಾರ್ಯಕ್ರಮ ಆಯೋಜನೆಗೆ ತೊಡಕಾಗುತ್ತಿದೆ ಎಂದು ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ತಿಳಿಸಿದರು.
ರಾಮನಗರ: ಕರ್ನಾಟಕ ಜಾನಪದ ಪರಿಷತ್ ಗೆ ರಾಜ್ಯ ಸರ್ಕಾರ ಪ್ರತಿವರ್ಷ ನೀಡುವ 1 ಕೋಟಿ ಹಾಗೂ ಬಜೆಟ್ ನಲ್ಲಿ ಘೋಷಿಸಿರುವ 2 ಕೋಟಿ ವಿಶೇಷ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಜಾನಪದ ಲೋಕದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಹಾಗೂ ಕಾರ್ಯಕ್ರಮ ಆಯೋಜನೆಗೆ ತೊಡಕಾಗುತ್ತಿದೆ ಎಂದು ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ತಿಳಿಸಿದರು. ನಗರದ ಹೊರವಲಯದ ಜಾನಪದ ಲೋಕದಲ್ಲಿ ದಸರಾ ಆಚರಣೆ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸರ್ಕಾರ 1 ಕೋಟಿ ಅನುದಾನ ನೀಡುತ್ತಿದೆ. ಇದು ಆಗಸ್ಟ್ ತಿಂಗಳೊಳಗೆ ದೊರೆಯುತ್ತಿತ್ತು. ಅದರೆ, ಈವರೆಗೆ ಅನುದಾನ ಬಂದಿಲ್ಲ. ಇದರ ಜೊತೆಗೆ ಸರ್ಕಾರ ಈ ಬಾರಿ ಬಜೆಟ್ ನಲ್ಲಿ 2 ಕೋಟಿ ವಿಶೇಷ ಅನುದಾನ ನೀಡಿದೆ. ಅದೂ ಸಹ ಈವರೆಗೆ ಬಂದಿಲ್ಲ. ಪ್ರಸ್ತುತ ಸರ್ಕಾರದ ಆರ್ಥಿಕ ಪರಿಸ್ಥಿತಿಯಲ್ಲಿ ಯಾವಾಗ ಅನುದಾನ ಬರುತ್ತದೆಯೋ ಗೊತ್ತಿಲ್ಲ ಎಂದರು. ಪ್ರತಿ ವರ್ಷದಂತೆ ಈ ಬಾರಿಯೂ ಜಾನಪದ ಲೋಕದಲ್ಲಿ ವಿಶೇಷವಾಗಿ ದಸರಾ ಹಬ್ಬದ ಆಚರಣೆ ನಡೆಯಲಿದೆ. ನಾಗರೀಕತೆ ಮತ್ತು ಆಧುನೀಕರಣಕ್ಕೆ ಅನುಗುಣವಾಗಿ ಜಾನಪದ ಲೋಕದಲ್ಲಿ ಪ್ರವಾಸಿಗರನ್ನು ಸೆಳೆಸಲು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇವೆ. ಈ ಬಾರಿ ಅವುಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದ್ದು, ಇದಕ್ಕೆ ಹಣಕಾಸಿನ ಅವಶ್ಯಕತೆ ಇದೆ ಎಂದು ಹೇಳಿದರು. ಗಿರಿಜನ ಲೋಕ ಯೋಜನೆ: ರಾಜ್ಯದಲ್ಲಿ ಮೂವತ್ತಾರು ಬುಡಕಟ್ಟುಗಳಿವೆ. ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಾಡಿನ ಆವರಣಗಳಲ್ಲಿಟ್ಟಿರುವ ಪ್ರಮುಖ ಬುಡಕಟ್ಟುಗಳ ಜೀವನ ಮತ್ತು ಸಂಸ್ಕೃತಿಯನ್ನು ನಾಡಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ''''''''ಗಿರಿಜನ ಲೋಕ'''''''' ಯೋಜನೆಯನ್ನು ರೂಪಿಸಲಾಯಿತು. ಪ್ರಥಮ ಹಂತದಲ್ಲಿ ಜೇನು ಕುರುಬರು, ಗೊಂಡರು, ಮಲೆಕುಡಿಯರು, ಹಾಲಕ್ಕಿ ಒಕ್ಕಲಿಗರು ಹಾಗೂ ಗೌಳಿಗರ ಹಾಡಿಗಳ ನಿರ್ಮಾಣ ಮಾಡಿ ಅವರ ಸಂಸ್ಕೃತಿಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದಲ್ಲದೆ ರಾಮನಗರ ಜಿಲ್ಲೆಯ ಇರುಳಿಗರು ಹಾಗೂ ಕಾಡುಗೊಲ್ಲರ ಹಾಡಿಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಜಾನಪದ ಲೋಕದಲ್ಲಿ ಈಗಾಗಲೆ ವಿವಿಧ ಹಂತಗಳ ವೈವಿಧ್ಯಮಯ ವಸ್ತು ಸಂಗ್ರಹಾಲಯಗಳು ಅಸ್ತಿತ್ವದಲ್ಲಿವೆ. ಅಲ್ಲಿನ ವಸ್ತುಗಳ ವೈಜ್ಞಾನಿಕ ಜೋಡಣೆ, ಸಾಂಸ್ಕೃತಿ ಹಿನ್ನಲೆ ಹಾಗೂ ಡಿಜಿಟಲಿಕರಣ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಲ್ಲದೆ ವಸ್ತು ಸಂಗ್ರಹಾಲಯಗಳ ವಿಸ್ತರಣೆಗೆ ಅಗತ್ಯವಾಗುವ ಹಣಕಾಸು ನೆರವನ್ನು ನೀಡುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಜಾನಪದ ಡಿಪ್ಲೊಮಾ ಕೋರ್ಸನ್ನು ಅಧಿಕೃತವಾಗಿ ಆರಂಭಿಸಲಾಗಿದೆ. ಈ ಕೋರ್ಸ್ ಗೆ 40 ಜನ ವಿವಿಧ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಹೊಸ ಪಠ್ಯಕ್ರಮದೊಂದಿಗೆ ತರಗತಿಗಳು ನಡೆಯುತ್ತಿವೆ. ಎಚ್.ಎಲ್.ನಾಗೇಗೌಡ ಕಲಾ ಶಾಲೆಯ ವತಿಯಿಂದ ಜನಪದ ಪ್ರದರ್ಶನ ಕಲೆಗಳ ಕಲಿಕೆ ಮತ್ತು ತರಬೇತಿ ಎಂಬ ಹೊಸ ಡಿಪ್ಲೊಮಾ ಕೋರ್ಸನ್ನು ಆರಂಭಿಸಲಾಗಿದೆ. ನಾಡಿನ ಹಿರಿಯ ಜನಪದ ಕಲಾವಿದರಿಂದ ತರಬೇತಿಯನ್ನು ಕೊಡಿಸುವ ಮೂಲಕ ಯುವ ಜನತೆಯನ್ನು ಪರಿಪೂರ್ಣ ಕಲಾವಿದರನ್ನಾಗಿ ರೂಪಿಸುವದು ಈ ಡಿಪ್ಲೊಮಾದ ಉದ್ದೇಶವಾಗಿದೆ ಎಂದು ರಾಮಚಂದ್ರೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಆದಿನ್ಯ ಸಂಜರಾಜ್, ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಇದ್ದರು. ಕೋಟ್ ........... ಜಾನಪದ ಲೋಕ ಆವರಣದಲ್ಲಿ ನಾಡಿನ ಬುಡಕಟ್ಟುಗಳು ಮತ್ತು ವಿವಿಧ ಸಮುದಾಯಗಳು ತಯಾರಿಸುವ ಕರಕುಶಲ ವಸ್ತುಗಳನ್ನು ತರಿಸಿಕೊಂಡು ಇಲ್ಲಿಗೆ ಬರುವ ಪ್ರವಾಸಿಗರಿಗೆ ಒದಗಿಸುವ ದೃಷ್ಟಿಯಿಂದ ಹಾಗೂ ಮೂಲ ಕಲಾಕಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮದೇ ಆದ ಕರಕುಶಲ ಕಲಾ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ. - ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಅಧ್ಯಕ್ಷರು, ಕಜಾಪ ಕೋಟ್ .............. ಜಾನಪದ ಮತ್ತು ಗ್ರಾಮೀಣ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಕೈಗೊಳ್ಳುವ ಯುವ ವಿದ್ವಾಂಸರಿಗೆ ಸಂಶೋಧನಾ ಯೋಜನೆಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿ ಬರುವ ಲೋಕೋತ್ಸವ ವೇಳೆಗೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. - ಪ್ರೊ.ಹಿ.ಚಿ.ಬೋರಲಿಂಗಯ್ಯ, ಕಾರ್ಯಾಧ್ಯಕ್ಷರು, ಕಜಾಪ 15ಕೆಆರ್ ಎಂಎನ್ 5.ಜೆಪಿಜಿ ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಪರಿಷತ್ ಅಧ್ಯಕ್ಷ ಪ್ರೋ.ಹಿ.ಶಿ.ರಾಮಚಂದ್ರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.