ಕರ್ತವ್ಯಲೋಪ, ಅಣಜಿ ಪಿಡಿಒ ಅಮಾನತು

| Published : Oct 14 2025, 01:02 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಅಣಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್ ಆದೇಶ ಹೊರಡಿಸಿದ್ದಾರೆ.

ರಟ್ಟೀಹಳ್ಳಿ: ತಾಲೂಕಿನ ಅಣಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್ ಆದೇಶ ಹೊರಡಿಸಿದ್ದಾರೆ.

ಬಸನಗೌಡ ಬಿ. ಪಾಟೀಲ್ ಅಮಾನತುಗೊಂಡ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಈತನ ವಿರುದ್ಧ ಅಣಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕರಿಸಿದ ಆರೋಪ ರುಜುವಾತು ಆಗಿರುವುದರಿಂದ ಅ. 10ರಂದು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸರ್ವೇ ನಂಬರ್ 95/ಎ/17ರ ರುದ್ರಭೂಮಿಗೆ ಮೀಸಲಿಟ್ಟ 2 ಎಕರೆ 10 ಗುಂಟೆ ಜಾಗ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಲಂಚ ಪಡೆದು ಆ ಜಾಗವನ್ನು ಮನೆ ಕಟ್ಟಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸಾರ್ವಜನಿಕರಿಂದ ಪೋನ್ ಪೇ ಮೂಲಕ ಲಂಚ ಪಡೆದು ಮನೆಗಳ ಹಾಗೂ ಖಾಲಿ ಜಾಗದ ಆಸ್ತಿಗಳನ್ನು ಇ ಸ್ವತ್ತು ಮಾಡಿದ ಆರೋಪ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಕೂಲಿ ಹಣವನ್ನು ನೀಡದೇ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.