ನಿತ್ಯವೂ ಹಂಪಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ.
ಹೊಸಪೇಟೆ: ಹಂಪಿಯ ಹಜಾರರಾಮ ದೇಗುಲ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಕಳೆದ ಕೆಲ ದಿನಗಳಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಈಗ ಮತ್ತೆ ಹಂಪಿಯಲ್ಲಿ ಭಗ್ನಗೊಂಡಿರುವ ಪುರಾತನ ಕಾಲದ ಎರಡು ಆಳ್ವರ್ (ತಮಿಳುನಾಡಿನ ಒಂದು ಭಕ್ತಿ ಪಂಥದವರು ಕೆತ್ತಿದ ವಿಗ್ರಹ) ವಿಗ್ರಹಗಳು, ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂರು ಪೀಠಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳ ಹಿಂದೆ ಕಲ್ಲಿನ ಚಾವಣಿ, ಆನೆಯ ವಿಗ್ರಹಗಳು ಪತ್ತೆಯಾಗಿದ್ದವು. ಈಗ ಮತ್ತೆ ಪುರಾತನ ಕಾಲದ ಭಗ್ನಗೊಂಡ ಆಳ್ವರ್ ವಿಗ್ರಹಗಳು ಪತ್ತೆಯಾಗಿರುವುದರಿಂದ ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಮತ್ತಷ್ಟು ಪುರಾತನ ವಿಗ್ರಹಗಳು ಪತ್ತೆಯಾಗಬಹುದು. ನಿತ್ಯವೂ ಹಂಪಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ.1565ರ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಪರಾಭವಗೊಂಡರು. ನಂತರ ಬಹುಮನಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗಿ ಸಾವಿರಾರು ವಿಗ್ರಹಗಳು, ದೇವರ ಮೂರ್ತಿಗಳ ಶಿರಚ್ಛೇದನಗೊಳಿಸಿ, ನಾಶಪಡಿಸಲಾಯಿತು. ಬಳಿಕ ಈಗ ನಡೆಯುತ್ತಿರುವ ಉತ್ಖನನದಲ್ಲಿ ವಿಗ್ರಹಗಳು ಪತ್ತೆಯಾಗುತ್ತಿವೆ.
ಈಗ ದೊರೆತ ಮೂರ್ತಿಗಳು ಆಳ್ವರ್ ಮೂರ್ತಿಗಳಾಗಿವೆ. ಸುಮಾರು 11 ಜನ ಆಳ್ವರ್ ಸಂತರು ವೈಷ್ಣವ ಮತ ಪ್ರಚಾರಕರಾಗಿದ್ದರು. ಹಂಪಿ ಪ್ರದೇಶದಲ್ಲಿ ವೈಷ್ಣವ ಭಕ್ತಿ ಪರಂಪರೆಯ ಪ್ರಭಾವ ಬಹಳ ಗಾಢವಾಗಿತ್ತು. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೈಷ್ಣವ ಸಂಪ್ರದಾಯ, ವಿಷ್ಣು ಭಕ್ತಿ ಮತ್ತು ಆಳ್ವರ್‌ಗಳ ಭಕ್ತಿಗೀತೆಗಳಿಗೆ ಹೆಚ್ಚಿನ ಗೌರವ ಇತ್ತು.ವಿಜಯನಗರ ಅರಸರು ವೈಷ್ಣವ ಧರ್ಮಕ್ಕೆ ದೊಡ್ಡ ಆಶ್ರಯ ನೀಡಿದ್ದರು. ಆಳ್ವರ್‌ಗಳು ಭಕ್ತಿಗೀತೆಗಳನ್ನು ಪಠಿಸುತ್ತಿದ್ದರು. ಇವರ ಪ್ರಭಾವ ವಿಜಯನಗರ ಕಾಲದ ಹಂಪಿಯಲ್ಲಿಯೂ ಇತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಹಂಪಿಯ ಹಜಾರರಾಮ ದೇವಸ್ಥಾನದಲ್ಲಿ ಸೂಕ್ಷ್ಮ, ಜಾಗರೂಕತೆಯಿಂದ ಹಾಗೂ ವೈಜ್ಞಾನಿಕವಾಗಿ ಉತ್ಖನನ ಮಾಡುವಾಗ ಈ ಆಳ್ವರ್ ವಿಗ್ರಹಗಳು ಶಿರಚ್ಛೇದನ ರೀತಿಯಲ್ಲಿ ಪತ್ತೆಯಾಗಿವೆ ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ.ಉತ್ಖನನದ ವೇಳೆ ದೊರೆತ ವಿಗ್ರಹಗಳನ್ನು ನೋಡಿದರೆ ಅಂದಿನ ದಾಳಿಯ ಭೀಕರತೆಯನ್ನು ತಿಳಿಯಬಹುದು. ಇನ್ನೂ ಹೆಚ್ಚಿನ ಮಟ್ಟದಲ್ಲಿ ದೊರೆಯುವ ವಿಗ್ರಹಗಳಿಂದ ಮತ್ತು ಕುರುಹುಗಳಿಂದ ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಮಂತಿಕೆಯನ್ನು ತಿಳಿಯಬಹುದು ಎನ್ನುತ್ತಾರೆ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವಿರೂಪಾಕ್ಷಿ.