ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಗುಜರಾತಿನ ಕಚ್ ಪ್ರಾಂತ್ಯದಿಂದ ತರಿಸಿರುವ 10 ಲಕ್ಷ ರು. ಮೌಲ್ಯದ ದಪ್ಪ ಕೊಂಬಿನ ವಿಶಿಷ್ಟ ‘ಕಾಂಕ್ರೇಜ್’ ತಳಿಯ ಹಸು ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಬೇಗೂರಿನ ಶ್ರೀ ಕೃಷ್ಣ ಗೋಶಾಲೆಯವರು ಹತ್ತಾರು ವಿಭಿನ್ನ ತಳಿಯ ಹಸು, ಎತ್ತು, ಎಮ್ಮೆ, ಕೋಣ, ಕುರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ವಿಶೇಷವೆಂದರೆ, ಗುಜರಾತ್‌ನ ಕಚ್ ಹಾಗೂ ರಾಜಸ್ಥಾನದ ಜೋಧ್‌ಪುರ ಪ್ರಾಂತ್ಯಗಳಲ್ಲಿ ಸಾವಿರಾರು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಕಾಂಕ್ರೇಜ್ ತಳಿಯ ಹಸು ಆಕರ್ಷಕ ಕೊಂಬುಗಳಿಂದಾಗಿ ನೋಡುಗರ ಕುತೂಹಲ ಕೆರಳಿಸಿದೆ.ಹರಪ್ಪ ನಾಗರಿಕತೆಯ ಕಾಲದಲ್ಲೇ ಈ ಹಸುಗಳ ಅಸ್ತಿತ್ವವಿತ್ತು ಎಂಬುದಕ್ಕೆ ದಾಖಲೆಗಳಲ್ಲಿ ಉಲ್ಲೇಖವಿದೆ. ಅಧಿಕ ಹಾಲು ನೀಡುವುರಿಂದ ಹೈನುಗಾರಿಕೆಗೆ ಹೆಚ್ಚಾಗಿ ಈ ಹಸುವನ್ನು ಸಾಕಲಾಗುತ್ತದೆ. ಜೊತೆಗೆ ಈ ಹಸುವು ಆಕಾರದಲ್ಲಿ ಬಲಿಷ್ಠವಾಗಿರುವುದರಿಂದ ಅಧಿಕ ಭಾರ ಎಳೆಯಲೂ ಬಳಸಲಾಗುತ್ತದೆಯಂತೆ.
ಸಾವಿರಾರು ವರ್ಷಗಳ ಇತಿಹಾಸ:‘ಗುಜರಾತಿನ ಕಚ್‌ನಿಂದ 10 ಲಕ್ಷ ರುಪಾಯಿಗೆ ಈ ಹಸುವನ್ನು ಇತ್ತೀಚೆಗೆ ಖರೀದಿಸಲಾಗಿತ್ತು. ಗುರುವಾರ ರಾತ್ರಿಯಷ್ಟೇ ಕೃಷಿ ಮೇಳಕ್ಕೆ ಇದನ್ನು ತರಲಾಯಿತು. ಕಾಂಕ್ರೇಜ್ ತಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸ್ಥಳೀಯರ ಪ್ರಯತ್ನದಿಂದಾಗಿ ಜತನದಿಂದ ತಳಿಯನ್ನು ಕಾಪಾಡಿಕೊಂಡು ಬರಲಾಗಿದೆ’ ಎಂದು ಗೋಶಾಲೆಯ ಸಿ.ಎನ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಕೊಂಬಿನ ಉದ್ದ ಒಂದೂವರೆ ಅಡಿ ಹಾಗೂ ಸುತ್ತಳತೆ 18 ಇಂಚುಗಳಿದೆ. ದಿನಕ್ಕೆ 15 ಲೀಟರ್ ಹಾಲು ನೀಡಲಿದ್ದು ಲೀಟರ್‌ಗೆ 120 ರುಪಾಯಿಯಂತೆ ಮಾರಾಟ ಮಾಡಲಾಗುವುದು. ತಳಿ ಸಂವರ್ಧನೆಗಾಗಿ ಈ ಹಸುವನ್ನು ಖರೀದಿಸಲಾಗಿದೆ ಎಂದು ಅವರು ವಿವರಿಸಿದರು.25 ಲಕ್ಷದ ಜಾಫರಾಬಾದಿ ಕೋಣ
‘ಗುಜರಾತ್‌ನ ಪೋರಬಂದರ್‌ನಿಂದ 6 ಲಕ್ಷ ರು. ಬೆಲೆಬಾಳುವ ಪಂಚಕಲ್ಯಾಣಿ ಎಮ್ಮೆ ತರಿಸಿದ್ದು ನಾಲ್ಕೂ ಕಾಲು, ಬಾಲ, ಕಣ್ಣಿನ ಭಾಗ ಬಿಳಿ ಬಣ್ಣದಲ್ಲಿರುವುದು ಇದರ ವಿಶೇಷವಾಗಿದೆ. 5 ಲಕ್ಷ ರು. ಬೆಲೆಬಾಳುವ ರಾಜಸ್ಥಾನದ ನಾರಿ ತಳಿಯೂ ಇಲ್ಲಿದೆ. ಅಳಿವಿನಂಚಿನಲ್ಲಿರುವ ಈ ತಳಿಯಲ್ಲಿ ಕೇವಲ 2 ಸಾವಿರ ಹಸುಗಳು ಮಾತ್ರ ಈಗ ಉಳಿದುಕೊಂಡಿವೆ. 3 ಲಕ್ಷ ರು. ಮೌಲ್ಯದ ಪಾಕಿಸ್ಥಾನದ ರಾಠಿ ಹಸು ದಿನಕ್ಕೆ 18 ಲೀಟರ್ ಹಾಲು ನೀಡುತ್ತದೆ. ಗುಜರಾತ್‌ನ ಪೋರಬಂದರಿನ ಜಾಫರಾಬಾದಿ ಕೋಣದ ಬೆಲೆ ಬರೋಬ್ಬರಿ 25 ಲಕ್ಷ ರುಪಾಯಿ’ ಎಂದು ಹೇಳಿದರು.ಇವು ಕಳೆಯಲ್ಲ, ಔಷಧಿಯ ಗುಣವುಳ್ಳ ಸೊಪ್ಪುಅನ್ನದಾತರು ತಮ್ಮ ಜಮೀನುಗಳಲ್ಲಿ ಕಳೆ ಎಂದು ನಿರ್ಲಕ್ಷಿಸಿ, ನಾಶ ಮಾಡುವ 50 ಕ್ಕೂ ಅಧಿಕ ಸೊಪ್ಪುಗಳು ಉತ್ತಮ ಆಹಾರವೂ ಅಲ್ಲದೇ ಔಷಧೀಯ ಗುಣಗಳನ್ನೂ ಒಳಗೊಂಡಿವೆ ಎಂದು ‘ಸಸ್ಯಾನ್ವೇಷಣಾ’ ಸಂಸ್ಥೆಯ ಶ್ರೀವತ್ಸ ಗೋವಿಂದರಾಜು ಹೇಳುತ್ತಿದ್ದರೆ ಸಾರ್ವಜನಿಕರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದುದು ಕೃಷಿ ಮೇಳದಲ್ಲಿ ಕಂಡುಬಂತು.
‘ನನ್ನನ್ನು ಕಾಡಿನಲ್ಲಿ ಬಿಟ್ಟು ಬಂದರೂ ಅಲ್ಲಿನ ಸೊಪ್ಪುಗಳನ್ನು ಆಹಾರವಾಗಿ ಬಳಸಿಕೊಂಡು ಬದುಕುತ್ತೇನೆ ಎಂದು ಯಾರಿಗೇ ಆದರೂ ವಿಶ್ವಾಸವಿರಬೇಕು. ಇದನ್ನು ಮಕ್ಕಳಲ್ಲಿ ಇದನ್ನು ಬೆಳೆಸುವ ಅವಶ್ಯಕತೆಯಿದೆ. ನನ್ನ ಜ್ಞಾನದ ಪ್ರಕಾರ ರೈತರು ಕಳೆ ಎಂದು ನಿರ್ಲಕ್ಷಿಸುವ 120 ಸೊಪ್ಪುಗಳು ಉತ್ತಮ ಆಹಾರಗಳಾಗಿದ್ದು ಔಷಧೀಯ ಗುಣಗಳನ್ನೂ ಹೊಂದಿವೆ. ಅದರಲ್ಲಿ 50 ಸೊಪ್ಪುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದೇನೆ’ ಎಂದು ಶ್ರೀವತ್ಸ ಸ್ಪಷ್ಟಪಡಿಸಿದರು.‘ಅಗ್ನಿ ಬಳ್ಳಿಯು ಮೊಣಕಾಲು ನೋವು ನಿವಾರಕವಾಗಿದೆ. ಕೊಮ್ಮೆ ಸೊಪ್ಪು(ಕಣ್ಣಿನ ಆರೋಗ್ಯ), ತಗಚೆ(ಚರ್ಮದ ಆರೋಗ್ಯ), ದೊಡ್ಡ ತೊಗಚೆ(ಉಳು ಕಡ್ಡಿ), ಕಾಡು ಬಸಲೆ(ಕಿಡ್ನಿ ಸಮಸ್ಯೆ ನಿವಾರಕ), ಒಂದೆಲಗ, ಶಂಖ ಪುಷ್ಪ, ಜಲಬ್ರಾಹ್ಮಿಗಳು ಮೆದುಳಿನ ಆರೋಗ್ಯಕ್ಕೆ ಪೂರಕವಾಗಿವೆ. ಅದೇ ರೀತಿ ತುಂಬೆ ಸೊಪ್ಪು, ಸಂಜೆ ಮಲ್ಲಿಗೆ, ಅಮೃತ ಬಳ್ಳಿ, ನೆಲಬಸಳೆ, ಜುಮಕಿ, ಮುಳ್ಳು ಅಣೆ, ಕಾಡು ಹೆಸರು, ಕತ್ತಿಕಾಯಿ, ಜಲಭೇದಿ, ಮುಟ್ಟಿದರೆ ಮುನಿ, ಕುಪ್ಪೆ, ನಿಂಬೆ ಹುಲ್ಲು, ಭೀಮನ ಕಡ್ಡಿ, ಕಾಡು ಬಸಲೇ, ಕನ್ನೆ ಮತ್ತಿತರ ಸೊಪ್ಪುಗಳೂ ಆರೋಗ್ಯಕ್ಕೆ ಸಹಕಾರಿಯಾಗಿವೆ’ ಎಂದು ವಿವರಿಸಿದರು.ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ
ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಕೃಷಿ ಮೇಳದಲ್ಲಿ ಜನರಿಂದ ಬೇಡಿಕೆ ಇದ್ದದ್ದು ಕಂಡುಬಂತು. ಬರಗು, ನವಣೆಯಿಂದ ತಯಾರಿಸಿದ ಚಂದಾಪುರದ ಸ್ನ್ಯಾಕ್ ಸ್ನಾಕ್ ಕುರ್‌ಕುರೆ, ಸಾಮೆ, ನವಣೆ, ರಾಗಿಯಿಂದ ತಯಾರಿಸಿದ ಬಿಸ್ಕೆಟ್, ಚಾಕಲೇಟ್, ಕೇಕ್‌ಗಳೂ ಹೆಚ್ಚಾಗಿ ಮಾರಾಟವಾದವು. ಮುಧೋಳದ ವೇಗಸ್ಪಾರೂಟ್ಸ್‌ನ ಅಣಬೆ ಉತ್ಪನ್ನಗಳು, ಕರ್ನಾಟಕ ಕೇಸರಿ ಬೆಳೆಗಾರರ ಸಂಘದಿಂದ ತಯಾರಿಸಿದ ಕೇಸರಿ ಮತ್ತು ಕಮಲದ ಗುಲ್ಕನ್, ಸೋಪು ಮತ್ತಿತರ ಉತ್ಪನ್ನಗಳೂ ಗಮನ ಸೆಳೆದವು.;Resize=(128,128))
;Resize=(128,128))