ನಾಳೆಯಿಂದ ಪ್ರಾಚೀನ ಸ್ಮಾರಕ ಸಂರಕ್ಷಣಾ ಅಭಿಯಾನ

| Published : Nov 18 2023, 01:00 AM IST

ಸಾರಾಂಶ

ಪ್ರಾಚೀನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಸದುದ್ದೇಶದಿಂದ ನಮ್ಮ ನಡಿಗೆ ಪರಂಪರೆಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಸ್ಮಾರಕಗಳ ಸ್ವಚ್ಛತೆ, ಸಂರಕ್ಷಣಾ ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.

ಮಂಡ್ಯ: ಪ್ರಾಚೀನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಸದುದ್ದೇಶದಿಂದ ನಮ್ಮ ನಡಿಗೆ ಪರಂಪರೆಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಸ್ಮಾರಕಗಳ ಸ್ವಚ್ಛತೆ, ಸಂರಕ್ಷಣಾ ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.

ಪ್ರಾಯೋಗಿಕವಾಗಿ ನಾಗಮಂಗಲ ತಾಲೂಕಿನ ಆರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಅವರ ನೇತೃತ್ವದಲ್ಲಿ ಗ್ರಾಪಂ ಸದಸ್ಯರು, ಸಿಬ್ಬಂದಿ ಹಾಗೂ ಊರಿನ ಜನರ ಜೊತೆಗೂಡಿ ಗಿಡ-ಗಂಟೆಗಳಿಂದ ಮುಚ್ಚಿಹೋಗುತ್ತಿದ್ದ ಸ್ಮಾರಕವೊಂದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸಂರಕ್ಷಿಸಲಾಗಿದೆ.

ಜಿಲ್ಲೆಯ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹೀಗೆ ಅವ್ಯವಸ್ಥಿತ ಸ್ಥಿತಿಯಲ್ಲಿರುವ ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸುವುದಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ನ.19ರಿಂದ 25ರವರೆಗೆ ಪಾರಂಪರಿಕ ವಾರವಾಗಿ ಘೋಷಣೆ ಮಾಡಲಾಗಿದೆ. ಏಳು ದಿನ ಗ್ರಾಪಂ ವ್ಯಾಪ್ತಿಯ ಜನರ ಸಹಯೋಗದೊಂದಿಗೆ ಒಂದೊಂದು ಸ್ಮಾರಕವನ್ನು ಸ್ವಚ್ಛಗೊಳಿಸುವುದು. ಸ್ಮಾರಕಗಳ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂಬ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಆ ಮೂಲಕ ಅಪರೂಪದ ಸ್ಮಾರಕಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಮಾಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

ಇತಿಹಾಸದ ಕುರುಹುಗಳಾಗಿರುವ ಎಷ್ಟೋ ಸ್ಮಾರಕಗಳು ಸೂಕ್ತ ರೀತಿಯಲ್ಲಿ ಸಂರಕ್ಷಣೆಯಿಲ್ಲದೆ ಅವಶೇಷಗಳಾಗಿ ಅನಾಥವಾಗಿ ಉಳಿದಿವೆ. ಗ್ರಾಮದಲ್ಲೇ ಇದ್ದು ಅವುಗಳ ಮೇಲೆ ಗಿಡ-ಗಂಟೆಗಳು ಬೆಳೆದುಕೊಂಡು ವಿಷಜಂತುಗಳ ಆವಾಸಸ್ಥಾನವಾಗಿದ್ದರೂ ಯಾರಿಗೂ ಅದನ್ನು ಸಂರಕ್ಷಣೆ ಮಾಡಬೇಕೆಂಬ ಅರಿವೇ ಇರುವುದಿಲ್ಲ. ಸ್ಮಾರಕಗಳು, ದೇವಾಲಯಗಳ ಮಹತ್ವವೂ ಜನರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿ ಸ್ಮಾರಕಗಳು, ದೇವಾಲಯಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಜನರನ್ನು ಪರಂಪರೆಯ ಕಡೆಗೆ ಮುನ್ನಡೆಸುವುದಕ್ಕಾಗಿ ಜಿಪಂ ಸಿಇಓ ಶೇಖ್‌ ತನ್ವೀರ್‌ ಆಸಿಫ್‌ ಈ ವಿಶಿಷ್ಠ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇವರ ಪ್ರಯತ್ನಕ್ಕೆ ಗ್ರಾಪಂ ವ್ಯಾಪ್ತಿಯ ಜನರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಏಳು ದಿನಗಳವರೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಾರಕಗಳು, ಪುರಾತನ ಕಾಲದ ದೇವಾಲಯಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ಗುರುತಿಸಿ ಪಟ್ಟಿ ಮಾಡಿಕೊಳ್ಳಲಾಗಿದೆ. ಅಲ್ಲೆಲ್ಲಾ ಪ್ರತಿ ದಿನ ಸ್ವಚ್ಛತೆಯನ್ನು ಕಾಪಾಡುವುದು. ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಡುವುದು. ಸ್ಮಾರಕಗಳು, ದೇವಾಲಯಗಳಿರುವ ಜಾಗದಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸುವುದು. ಸ್ವಚ್ಛತೆಯ ಬಳಿಕ ಯಥಾಸ್ಥಿತಿಯಲ್ಲಿ ಕಾಪಾಡುವಂತೆ ಗ್ರಾಮದ ಜನರಿಗೆ ಜವಾಬ್ದಾರಿ ಕೊಟ್ಟು ಜಾಗೃತಿ ಮೂಡಿಸಲಾಗುತ್ತಿದೆ.

ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಪಾರಂಪರಿಕ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡು ಪ್ರಗತಿಯತ್ತ ಮುನ್ನಡೆಸುತ್ತಿದ್ದಾರೆ. ಪುರಾತನ ಕಾಲದ ಶಾಸನಗಳು, ವೀರಗಲ್ಲುಗಳು ಸೇರಿದಂತೆ ಅನಾಥವಾಗಿ 423 ಶಾಸನಗಳನನು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲೆಯ ಏಳು ತಾಲೂಕುಗಳಲ್ಲಿ 18 ಜಾಗಗಳನ್ನು ಗುರುತಿಸಿ ಹೆರಿಟೇಜ್‌ ಪಾಕ್‌ ನಿರ್ಮಿಸುವ ಸಂಬಂಧ ನೀಲಿ ನಕಾಶೆ ತಯಾರಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಅದರ ಮುಂದುವರಿದ ಭಾಗವಾಗಿ ಅಳಿವಿನಂಚಿನಲ್ಲಿರುವ ಸ್ಮಾರಕಗಳು, ದೇಗುಲಗಳನ್ನು ಸ್ವಚ್ಛಗೊಳಿಸಿ ಸಂರಕ್ಷಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಗ್ರಾಪಂ ವ್ಯಾಪ್ತಿಯ ಜನರನ್ನು ಒಗ್ಗೂಡಿಸಿಕೊಂಡು ಸಿಇಓ ಶೇಖ್‌ ತನ್ವೀರ್‌ ಆಸಿಫ್‌ ಅವರು ಮುನ್ನಡೆಯುತ್ತಿರುವುದು ವಿಶೇಷವಾಗಿದೆ. ಒಂದು ವಾರ ನಡೆಯುವ ಅಭಿಯಾನದಲ್ಲಿ ಒಂದಷ್ಟು ಪ್ರಾಚೀನ ದೇಗುಲಗಳನ್ನು ಸಂರಕ್ಷಿಸಿಡುವುದಕ್ಕೆ ಮುಂದಾಗಿದ್ದಾರೆ.ಪರಂಪರೆಯ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ನಡೆ ಪರಂಪರೆಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ನ.19 ರಿಂದ 25ರವರೆಗೆ ಪಾರಂಪರಿಕ ವಾರ ಎಂದು ಘೋಷಿಸಲಾಗಿದೆ. ಈ ಏಳು ದಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೊಂದು ಪ್ರಾಚೀನ ದೇಗುಲ, ಸ್ಮಾರಕಗಳನ್ನು ಗುರುತಿಸಿ ಸ್ವಚ್ಛವಾಗಿಡಲು ನಿರ್ಧರಿಸಿದೆ. ಜನರ ಸಹಯೋಗದೊಂದಿಗೆ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಜನರಲ್ಲಿ ಜಾಗೃತಿಯನ್ನೂ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಶೇಖ್‌ ತನ್ವೀರ್‌ ಆಸಿಫ್ ತಿಳಿಸಿದರು.