ಸಾರಾಂಶ
ಅನಿಲ್ ಬಿರಾದಾರ್
ಕೊಡೇಕಲ್ : ಬಸವಸಾಗರ ಜಲಾಶಯಕ್ಕೆ ಒಳಹರಿವು ತಗ್ಗಿದ್ದು, ನದಿಗೆ ಬಿಡಲಾಗುತ್ತಿದ್ದ ನೀರನ್ನು ಶನಿವಾರ ಜಲಾಶಯದ ಗೇಟ್‌ಗಳನ್ನು ಬಂದ್ ಮಾಡುವ ಮೂಲಕ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಹೊರಹರಿವನ್ನು ಸ್ಥಗಿತಗೊಳಿಸಲಾಗಿದ್ದು, 6 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಜಲಾಶಯಕ್ಕೆ ಸದ್ಯ 75 ಸಾವಿರ ಕ್ಯುಸೆಕ್ ಒಳಹರಿವಿದ್ದು, ಪ್ರತಿಶತ ಶೇ.90 ರಷ್ಟು ಭರ್ತಿಯಾಗಿದೆ.
ಕಳೆದ ಜುಲೈ ಮಧ್ಯಂತರದಿಂದ ಆಗಸ್ಟ್ ತಿಂಗಳವರೆಗೆ ಜಲಾಶಯಕ್ಕೆ 456 ಟಿಎಂಸಿ ನೀರು ಒಳಹರಿವು ಬಂದಿದ್ದು, ಜಲಾಶಯದ ಗೇಟ್‌ಗಳಿಂದ ಹಾಗೂ ಎಂಪಿಸಿಎಲ್ ಎಡದಂತೆ ಮತ್ತು ಬಲದಂಡೆ ಕಾಲುವೆಗಳಿಂದ 430 ಟಿಎಂಸಿಗೂ ಅಧಿಕ ನೀರನ್ನು ಶನಿವಾರದವರೆಗೆ ಜಲಾಶಯದಿಂದ ನದಿಗೆ ಬಿಡಲಾಗಿದ್ದು, ಈ ಪೈಕಿ ಕಾಲುವೆಗಳಿಗೆ 10.80 ಟಿಎಂಸಿ ನೀರು ಬಳಕೆಯಾಗಿದೆ.
456 ಟಿಎಂಸಿ ಪ್ರಮಾಣದ ನೀರು ನದಿಯ ಮೂಲಕ ಆಂಧ್ರಕ್ಕೆ ಹರಿಸಲಾಗಿದೆ. ಆದರೆ, ನದಿಯ ನೀರು ಸಂಪೂರ್ಣ ಬಳಕೆಯಾಗದ ಕಾರಣ ಬಂಗಾಳ ಕೊಲ್ಲಿಯ ಸಮುದ್ರ ಸೇರಿದೆ. ಸರ್ಕಾರವು ರಾಜ್ಯದ ಕಾವೇರಿ ನದಿಗೆ ನೀಡಿದ ಪ್ರಾಮುಖ್ಯತೆಯನ್ನು ಕೃಷ್ಣಾ ನದಿಗೆ ನೀಡಿದ್ದೇಯಾದಲ್ಲಿ ಕೃಷ್ಣಾ ಜಲಾನಯನ ಬಹುತೇಕ ಕಡೆ ನೀರಿನ ಅಭಾವವನ್ನು ತಪ್ಪಿಸಬಹುದು ಎನ್ನಲಾಗಿದೆ.
ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ತಕರಾರು ಮಾಡಿದ್ದರಿಂದ ಆಲಮಟ್ಟಿಯ 524 ಮೀಟರ್ ಬದಲಾಗಿ 519 ಮೀಟರ್ ಮಿತಿಗೊಳಿಸಿಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಮುತುರ್ವಜಿ ವಹಿಸಿ ಕೇವಲ ತಾವು ರಾಜ್ಯದ ದಕ್ಷಿಣಕ್ಕೆ ಸಿಮೀತವಾಗದೇ ಈ ಭಾಗದ ರೈತರಿಗೆ ಅನೂಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.
ದಕ್ಷಿಣ ಭಾರತದ ಎರಡನೇ ಅತಿದೊಡ್ಡ ನದಿಯಾದ ಕೃಷ್ಣೆಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮನಂತರ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹರಿಯುವ ಕೃಷ್ಣಾ ನೀರು ಎಲ್ಲಿಯೂ ಸಹ ಸಂಪೂರ್ಣ ಪ್ರಮಾಣದಲ್ಲಿ ಬಳಕೆಯಾಗದೆ ವ್ಯರ್ಥವಾಗುತ್ತಲೇ ಇದೆ. ಕರ್ನಾಟಕದಲ್ಲಿಯೇ ಕೃಷ್ಣೆಯು ಅದರ ಉಪನದಿಗಳಾದ ತುಂಗಭದ್ರಾ, ಕೊಯ್ನಾ, ಭೀಮಾ, ಮಲಪ್ರಭಾ ಮತ್ತು ಘಟಪ್ರಭಾಗಳೊಟ್ಟಿಗೆ ಸುಮಾರು 483 ಕಿಮೀ ಹರಿಯುತ್ತದೆ.
-ಜಲಾನಯನ ಪ್ರದೇಶ ಹಾಗೂ ಆಣೆಕಟ್ಟುಗಳ ವಿವರ:
ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದರ ಕಿಮೀ ಇದ್ದು, ಇದರಲ್ಲಿ ಮಹಾರಾಷ್ಟ್ರದಲ್ಲಿ 68,000 ಚದರ ಕಿಮೀ ಕರ್ನಾಟಕದಲ್ಲಿ 1,12,600 ಚದರ ಕಿಮೀ ಹಾಗೂ ಆಂಧ್ರ ಪ್ರದೇಶದಲ್ಲಿ 75,600 ಚದರ ಕಿಮೀ ವ್ಯಾಪಿಸಿದೆ.
ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಕೊಯ್ನಾದ ಹತ್ತಿರ, ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಶ್ರೀಶೈಲಂ ಮತ್ತು ನಾಗಾರ್ಜುನಸಾಗರದಲ್ಲಿ ಕೃಷ್ಣಾ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ. ಹಿಪ್ಪರಗಿಯಲ್ಲಿ 13 ಟಿಎಂಸಿ ಆಲಮಟ್ಟಿಯಲ್ಲಿ 123 ಟಿಎಂಸಿ (519.60ಮೀಟರ್ ವರೆಗೆ) ಹಾಗೂ ನಾರಾಯಣಪುರದಲ್ಲಿ 33 ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತಿದೆ.
ಇದರಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ‘ಸ್ಕೀಂ ಎ’ಅಡಿ 169 ಟಿಎಂಸಿ ನೀರಿನ ಪೂರ್ಣ ಸಂಗ್ರಹವಾದಂತಾಗುತ್ತದೆ. ಪ್ರಥಮ ಘಟ್ಟದಲ್ಲಿ 119 ಟಿಎಂಸಿ ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗೂ ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.
ಬಸವಸಾಗರ ಜಲಾಶಯ: ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿಯುವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.
ಏನಿದು ಕ್ಯುಸೆಕ್: ಕ್ಯುಸೆಕ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಅನ್ನುವುದು ನೀರಿನ ಹರಿವಿನ ವೇಗ ಅಳೆಯಲು ಬಳಸುತ್ತಾರೆ. 1 ಕ್ಯುಸೆಕ್ ಎಂದರೆ ಪ್ರತಿ ಸೆಕೆಂಡ್‌ಗೆ 28.3 ಲೀಟರ್ ನೀರು ಹರಿದು ಹೋದರೆ ಅದನ್ನು ಒಂದು ಕ್ಯುಸೆಕ್ ನೀರು ಎಂದು ಅಳೆಯುತ್ತಾರೆ. ಒಂದು ಟಿಎಂಸಿ ಎಂದರೆ: (ಒಂದು ಸಾವಿರ ದಶಲಕ್ಷ ಘನ ಅಡಿ) ಒಂದು ಟಿಎಂಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ. ಉದಾಹರಣೆಗೆ 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿಎಂಸಿ ಅಡಿಗೆ ಸಮ ಅಥವಾ 10 ಸಾವಿರ ಲೀಟರ್ ಸಾಮರ್ಥ್ಯದ 18,33,000 ಟ್ರಕ್ ಗಳಲ್ಲಿ ತುಂಬಿದ ನೀರು. 100 ಟಿಎಂಸಿ ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಈ 100 ಟಿಎಂಸಿ ನೀರನ್ನು ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಲೀಟರ್ ಲೆಕ್ಕದಲ್ಲಿ ಹೇಳುವುದಾದದರೆ 1 ‘ಟಿಎಂಸಿ'''''''' ನೀರು ಎಂದರೆ, 2,830 ಕೋಟಿ ಲೀಟರ್, 11,000 ಕ್ಯುಸೆಕ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿಎಂಸಿ ಆಗುತ್ತದೆ.