ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ಆಂಧ್ರ ರೈತರು

| Published : May 28 2024, 01:02 AM IST / Updated: May 28 2024, 01:03 AM IST

ಸಾರಾಂಶ

ಕಳೆದ ನಾಲ್ಕೈದು ದಿನಗಳಿಂದ ನಗರದ ಮೀನಾಕ್ಷಿ ವೃತ್ತ ಸೇರಿದಂತೆ ನಗರದ ವಿವಿಧೆಡೆಯ ಬಿತ್ತನೆ ಬೀಜಗಳ ಅಂಗಡಿಗಳ ಮುಂದೆ ರೈತರು ಜಮಾಯಿಸುತ್ತಿದ್ದಾರೆ.

ಬಳ್ಳಾರಿ: ಮುಂಗಾರು ಹಂಗಾಮಿನ ಬಿತ್ತನೆಗೆ ಹತ್ತಿ, ತೊಗರಿ ಬೀಜಗಳ ಖರೀದಿಗೆ ರೈತರು ನೂರಾರು ಸಂಖ್ಯೆಯಲ್ಲಿ ಖಾಸಗಿ ಅಂಗಡಿಗಳ ಮುಂಭಾಗ ಮುಗಿ ಬೀಳುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ನಗರದ ಮೀನಾಕ್ಷಿ ವೃತ್ತ ಸೇರಿದಂತೆ ನಗರದ ವಿವಿಧೆಡೆಯ ಬಿತ್ತನೆ ಬೀಜಗಳ ಅಂಗಡಿಗಳ ಮುಂದೆ ರೈತರು ಜಮಾಯಿಸುತ್ತಿದ್ದಾರೆ. ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಭತ್ತ, ಜೋಳ, ಮುಸುಕಿನಜೋಳ, ಸೂರ್ಯಕಾಂತಿ ಬೀಜಗಳನ್ನು ಕೃಷಿ ಇಲಾಖೆ ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡುತ್ತಿದೆ. ಆದರೆ, ಸಬ್ಸಿಡಿ ಇಲ್ಲದ ಕಾರಣ ಹತ್ತಿ ಬಿತ್ತನೆ ಬೀಜಗಳನ್ನು ರೈತರು ಖಾಸಗಿಯಲ್ಲಿಯೇ ಖರೀದಿಸಬೇಕಾಗಿದೆ. ಹೀಗಾಗಿ ಹತ್ತಿ ಬಿತ್ತನೆಗೆ ಮೊರೆ ಹೋಗಿರುವ ರೈತರು ಖಾಸಗಿ ಅಂಗಡಿಗಳತ್ತ ಮುಖ ಮಾಡಿದ್ದಾರೆ.

ಇನ್ನು ಗಡಿ ಭಾಗದಲ್ಲಿರುವ ಆಂಧ್ರಪ್ರದೇಶದ ಅನೇಕ ಹಳ್ಳಿಗಳಿಂದ ನೂರಾರು ಸಂಖ್ಯೆಯ ರೈತರು ತೊಗರಿ ಬೀಜ ಬಿತ್ತನೆಗೆ ಬಳ್ಳಾರಿಗೆ ಆಗಮಿಸಿದ್ದು, ಖರೀದಿಗಾಗಿ ಮುಗಿ ಬೀಳುತ್ತಿರುವ ದೃಶ್ಯ ಕಂಡು ಬಂತು.

ಆಂಧ್ರ ಪ್ರದೇಶದ ಗುಂತಕಲ್ಲು, ಉರವಕೊಂಡ, ಆಲೂರು, ಆದೋನಿ, ರಾಯದುರ್ಗ ಸೇರಿದಂತೆ ವಿವಿಧ ತಾಲೂಕುಗಳ ಹತ್ತಾರು ಗ್ರಾಮಗಳ ರೈತರು ಬಿತ್ತನೆಬೀಜ ಖರೀದಿಗೆ ಬಳ್ಳಾರಿಗೆ ಆಗಮಿಸಿದ್ದರು. ಹೀಗಾಗಿ ಬಿತ್ತನೆ ಬೀಜಗಳ ಅಂಗಡಿಗಳ ಮುಂದೆ ಜನಜಂಗುಳಿ ಇತ್ತು.

ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ಆಂಧ್ರಪ್ರದೇಶದ ರೈತರು, ಈ ಮೊದಲಿನಿಂದಲೂ ಬಳ್ಳಾರಿಯಲ್ಲಿಯೇ ನಾವು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದೇವೆ. ಪ್ರಮುಖವಾಗಿ ತೊಗರಿ, ಹತ್ತಿ, ಉದ್ದು, ಅಲಸಂದಿ, ಮೆಕ್ಕೆಜೋಳ ಬಿತ್ತನೆಬೀಜವನ್ನು ಬಳ್ಳಾರಿಯಲ್ಲಿಯೇ ಖರೀದಿಸುತ್ತೇವೆ. ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಿಗೆ ತೆರಳಲು ಸಾಕಷ್ಟು ದೂರವಾಗುತ್ತದೆ. ಹೀಗಾಗಿ ಬಳ್ಳಾರಿಯಲ್ಲಿಯೇ ನಿರಂತರ ಒಡನಾಟ ಇಟ್ಟುಕೊಂಡಿದ್ದೇವೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಬಿತ್ತನೆಬೀಜದ ದರ ಹೆಚ್ಚಾಗಿದ್ದು, ಬಳ್ಳಾರಿಗೆ ಬಿತ್ತನೆಬೀಜ ಖರೀದಿಗೆ ಬರಲು ಇದು ಸಹ ಕಾರಣವಾಗಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಶುರುವಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಕಳೆದ ಒಂದು ವಾರದಿಂದ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದೇವೆ. ಹತ್ತಿ ಬೀಜ ಹೊರತುಪಡಿಸಿದರೆ ಉಳಿದಂತೆ ರೈತರಿಗೆ ಅಗತ್ಯ ಬಿತ್ತನೆ ಬೀಜ ಪೂರೈಕೆ ಮಾಡುತ್ತಿದ್ದೇವೆ. ಹತ್ತಿಬೀಜ ಖರೀದಿಸುವ ರೈತರು ಅಧಿಕೃತ ಡೀಲರ್‌ಗಳಲ್ಲಿಯೇ ಖರೀದಿಸಬೇಕು. ತಪ್ಪದೇ ಬಿಲ್ ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ತಿರುಮಲೇಶ್ ಕನ್ನಡಪ್ರಭಕ್ಕೆ ತಿಳಿಸಿದರು.

ಬಿತ್ತನೆ ಬೀಜ ಖರೀದಿಗೆ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರಿಂದ ನಗರದ ಮೀನಾಕ್ಷಿ ವೃತ್ತದಲ್ಲಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ರೈತರು ಅಂಗಡಿಗಳ ಮುಂದೆ ಮುಗಿ ಬಿದ್ದು ಖರೀದಿಗೆ ಮುಂದಾದರು. ಸ್ಥಳಕ್ಕೆ ಆಗಮಿಸಿದ ಸಂಚಾರ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಿದರು.ತೊಗರಿ, ಅಲಸಂದಿ ಬೀಜಕ್ಕಾಗಿ ಆಂಧ್ರದಿಂದ ಬಂದಿರುವೆ. ಅನಂತಪುರಕ್ಕೆ ತುಂಬ ದೂರವಿದೆ. ಮೊದಲಿನಿಂದಲೂ ಬಳ್ಳಾರಿಯಲ್ಲಿಯೇ ಬಿತ್ತನೆಬೀಜ ಖರೀದಿ ಮಾಡುತ್ತಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖರೀದಿಗೆ ಬಂದಿದ್ದೇವೆ ಎನ್ನುತ್ತಾರೆ ಗುಂತಕಲ್ಲು ರೈತ ಲಕ್ಷ್ಮಿನಾರಾಯಣ ರೆಡ್ಡಿ.

ಬಳ್ಳಾರಿ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಿಲ್ಲ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಹೀಗಾಗಿ ರೈತರು ಆತಂಕಗೊಳ್ಳಬೇಕಾಗಿಲ್ಲ. ಅಗತ್ಯದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಬಳ್ಳಾರಿ ಜಂಟಿ ಕೃಷಿ ನಿರ್ದೇಶಕ ಡಾ.ತಿರುಮಲೇಶ್.