ಸಾರಾಂಶ
ಪೌಷ್ಠಿಕಾಂಶ ಆಹಾರ ಸೇವನೆಯಿಂದ ರಕ್ತ ಹೀನತೆ ತಟೆಗಟ್ಟಬಹುದು: ಡಾ.ವಿಜಯಕುಮಾರ್ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅನೀಮಿಯಾ ಅರಿವು
ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅನೀಮಿಯಾ ಕುರಿತು ಅರಿವು ಹಾಗೂ ಪರೀಕ್ಷೆ ಶಿಬಿರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಅನೀಮಿಯಾ (ರಕ್ತಹೀನತೆ) ತಡೆಗಟ್ಟಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಹೇಳಿದರು.
ಬುಧವಾರ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಅನೀಮಿಯಾ ಕುರಿತು ಅರಿವು ಹಾಗೂ ಪರೀಕ್ಷೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ರಕ್ತದಲ್ಲಿ ಹಿಮೋಗ್ಲೊಬಿನ್ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಪ್ರತಿಯೊಬ್ಬರಲ್ಲೂ ಹಿಮೋಗ್ಲೊಬಿನ್ ಅಂಶ ಶೇ.12 ರಷ್ಟು ಇರಬೇಕು. ರಕ್ತಹೀನತೆಯಿಂದ ಮಕ್ಕಳಲ್ಲಿ ಏಕಾಗ್ರತೆ ಶಕ್ತಿ ಕಡಿಮೆ ಯಾಗುತ್ತದೆ. ಮಹಿಳೆಯರಲ್ಲಿ ಪದೇ ಪದೇ ಗರ್ಭಪಾತ ಉಂಟಾಗುತ್ತದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತದೆ. ಹೆಣ್ಣು ಮಕ್ಕಳಿಗೆ ಪೌಷ್ಠಿ ಕಾಂಶಯುಕ್ತ ಆಹಾರ ನೀಡುವಲ್ಲಿ ತಾರತಮ್ಯ, ಸಮರ್ಪಕ ಪ್ರಮಾಣದ ಆಹಾರ ಅಲಭ್ಯತೆ, ಬಡತನ ಮುಂತಾದ ಕಾರಣಗಳಿಂದ ಅಪೌಷ್ಠಿಕತೆಯಿಂದ ರಕ್ತ ಹೀನತೆ ಉಂಟಾಗುತ್ತಿದೆ ಎಂದರು.
ಸೊಪ್ಪು,ತರಕಾರಿ, ಹಣ್ಣು,ಹಂಪಲು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು. ಅನೀಮಿಯಾ ಮುಕ್ತ ಕರ್ನಾಟಕ ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ 6 ತಿಂಗಳಿನಿಂದ18 ವರ್ಷದೊಳಗಿನ ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳ ತಪಾಸಣೆ ಮಾಡಲಾಗುತ್ತದೆ. ತಾಲೂಕಿನಲ್ಲಿ 397 ಗರ್ಭಿಣಿಯರು, 305 ಬಾಣಂತಿಯರು, 6 ತಿಂಗಳಿನಿಂದ 18 ವರ್ಷದ 15,586 ಮಕ್ಕಳು, 1739 ಮಹಿಳೆಯರಿಗೆ ಹಿಮೋಗ್ಲೊಬಿನ್ ತಪಾಸಣೆ ನಡೆಸ ಲಾಗುತ್ತದೆ. ಹಿಮೋಗ್ಲೊಬಿನ್ ಅಂಶ ಕಡಿಮೆ ಇರುವವರಿಗೆ ಕಬ್ಬಿಣಾಂಶದ ಮಾತ್ರೆ, ತೀವ್ರವಾಗಿ ಅನೀಮಿಯಾ ದಿಂದ ಬಳಲುತ್ತಿದ್ದರೆ ಕಬ್ಬಿಣಾಂಶದ ಚುಚ್ಚುಮದ್ದು ನೀಡಲಾಗುತ್ತದೆ. ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಆರೋಗ್ಯವೇ ಸಂಪತ್ತು. ಹೆಣ್ಣುಮಕ್ಕಳು ಸಮರ್ಪಕ ಆಹಾರ ಸೇವನೆ ಮಾಡದಿರುವುದರಿಂದ ಇವರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತಿದೆ. ಆಹಾರದಲ್ಲಿ ಮೊಳಕೆ ಕಾಳುಗಳು, ತರಕಾರಿ, ಸೊಪ್ಪು, ತುಪ್ಪ ಹೆಚ್ಚಾಗಿ ಸೇವಿಸಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವುದರಿಂದ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಆರೋಗ್ಯ ಅರಿವು ಹೊಂದಿ ಇತರರಿಗೂ ಅರಿವು ಮೂಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸಿಸ್ಟರ್ ಉಷಾ ಮಾತನಾಡಿ, ಆರೋಗ್ಯವೇ ಭಾಗ್ಯ. ಸುಖ, ಶಾಂತಿ, ನೆಮ್ಮದಿಯಿಂದ ಇರಲು ಉತ್ತಮ ಆರೋಗ್ಯ ಮುಖ್ಯ ಎಂದರು. ವೈದ್ಯರಾದ ಡಾ.ಶ್ವೇತಾ, ಡಾ.ಪೂರ್ವಿಕ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಆರೋಗ್ಯ ಶುಶ್ರೂಷಕಿ ಅನ್ನಮ್ಮ, ಆರೋಗ್ಯ ಇಲಾಖೆ ಕಿರಣ್ ಮತ್ತಿತರರಿದ್ದರು. ನಂತರ ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ ಮಾಡಲಾಯಿತು.