ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿನಗರದ ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಲಾದ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು ನೇತೃತ್ವದಲ್ಲಿ ಆರಂಭವಾಗಿದ್ದ ಆಹೋರಾತ್ರಿ ಧರಣಿಯನ್ನುಕೈಬಿಡಲಾಗಿದೆ.ಉಡುಪಿ ಎಪಿಎಂಸಿಗೆ ಪ್ರತಿ ತಿಂಗಳು 12.5 ಲಕ್ಷ ರು. ಆದಾಯವಿದ್ದರೂ ಸರ್ಕಾರಕ್ಕೆ 4.5 ಲಕ್ಷ ಆದಾಯ ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ವಂಚಿಸಲಾಗಿದೆ. ಗೋದಾಮಿನ ಬಾಡಿಗೆ ಪಡೆದ ವ್ಯಕ್ತಿ ಮೃತಪಟ್ಟು 3 ವರ್ಷವಾದರೂ ಗುತ್ತಿಗೆ ನವೀಕರಿಸದೆ ಅದೇ ವ್ಯಕ್ತಿಯ ಹೆಸರಿನಲ್ಲಿ ಬೇರೆಯವರಿಂದ ಬಾಡಿಗೆ ಪಡೆದು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು, ಬುಧವಾರ ಎಪಿಎಂಸಿ ಮುಂಭಾಗದಲ್ಲಿ ಎಪಿಎಂಸಿ ರಕ್ಷಣಾ ಸಮಿತಿಯ ಮೂಲಕ ಸಾರ್ವಜನಿಕರು, ವರ್ತಕರು, ಕೃಷಿಕರು ಸೇರಿಕೊಂಡು ಆಹೋರಾತ್ರಿ ಧರಣಿ ಆರಂಭಿಸಿದ್ದರು. ಎಸಿ, ಡಿಸಿ, ಸಂಸದೆ, ಶಾಸಕರಿಗೆ ಮನವಿ ನೀಡಲಾಯಿತು.
ಈ ನಡುವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಶಾಸಕ ಯಶಪಾಲ್ ಸುವರ್ಣ ಅವರು ಭ್ರಷ್ಟ ಅಧಿಕಾರಿಗಳು ನನ್ನ ಕ್ಷೇತ್ರಕ್ಕೆ ಬೇಡ, ಅವರನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು.ಈ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟ ಎಂಪಿಎಂಸಿ ರಕ್ಷಣಾ ಸಮಿತಿಯ ಅಧ್ಯಕ್ಷ ವಿಜಯ ಕೊಡವೂರು ಅವರು, ಭ್ರಷ್ಟ ಅಧಿಕಾರಿಯ ಅಮಾನತಿನಿಂದ ರೈತರ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ, ಎಲ್ಲರಿಗೂ ಸಂಭ್ರಮವಾಗಿದೆ. ಮುಂದೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.